
ಬಳ್ಳಾರಿ,ಏ.30: ಪ್ರಜಾಪ್ರಭುತ್ವ ಸುಭದ್ರಗೊಳಿಸಲು ಮತದಾನ ಅತ್ಯಂತ ಅವಶ್ಯಕವಾಗಿದ್ದು, ಮೇ 10 ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಮತ್ತು ಜಿಲ್ಲೆಯ ಶೇಕಡವಾರು ಮತದಾನ ಪ್ರಮಾಣ ಹೆಚ್ಚಿಸಲು ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಕರೆ ನೀಡಿದರು.
ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಅಂಗವಾಗಿ ನಗರದ ಮೋತಿ ವೃತ್ತದ ಬಳಿ ಭಾನುವಾರ ಹಮ್ಮಿಕೊಂಡಿದ್ದ ನಮ್ಮ ನಡೆ, ಮತಗಟ್ಟೆಯ ಕಡೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಅಂದಾಜು ಶೇ.75 ರಷ್ಟು ಪ್ರಮಾಣ ಮತದಾನವಾಗಿತ್ತು. ಈ ಬಾರಿ ಶೇ.100 ರಷ್ಟು ಮತದಾನ ಹೊಂದಲು ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಯಾರೂ ಮತದಾನದಿಂದ ಹೊರಗುಳಿಯಬಾರದು ಎಂದು ತಿಳಿಸಿದರು.
ಮತದಾನ ದಿನದಂದು ಬಿಸಿಲಿನ ತಾಪದಿಂದ ಆಗುವ ತೊಂದರೆಯನ್ನು ತಪ್ಪಿಸಲು ಮತಗಟ್ಟೆ ಕೇಂದ್ರಗಳಲ್ಲಿ ಶ್ಯಾಮಿಯಾನ ವ್ಯವಸ್ಥೆ, ಸಾರ್ವಜನಿಕರಿಗೆ ವಿಶ್ರಮಿಸಲು ವಿಶ್ರಾಂತಿ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಹಾಗೂ ಜಿಲ್ಲೆಯಲ್ಲಿ ಮತಗಟ್ಟೆ ಕೇಂದ್ರಗಳು ಜನರನ್ನು ಆಕರ್ಷಣೆಗೊಳ್ಳುವಂತೆ ಸಿದ್ಧಗೊಂಡಿವೆ ಎಂದು ತಿಳಿಸಿದರು.
*ಹೆಚ್ಚು ಯುವ ಮತದಾರರನ್ನು ನೊಂದಾಯಿಸಿದ ಪ್ರಥಮ ಜಿಲ್ಲೆ:* ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 38,866 ಜನ ಯುವ ಮತದಾರರು ನೊಂದಾಯಿಸಿಕೊಂಡಿದ್ದು, ರಾಜ್ಯದಲ್ಲಿಯೇ ಅತಿಹೆಚ್ಚು ಯುವ ಮತದಾರರನ್ನು ನೊಂದಾಯಿಸಿದ ಪ್ರಥಮ ಜಿಲ್ಲೆ ಎಂಬ ಹೆಗ್ಗಳಿಕೆ ಬಳ್ಳಾರಿ ಜಿಲ್ಲೆಗೆ ಲಭಿಸುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹೇಳಿದರು. ನೊಂದಣಿಗೆ ಸಹಭಾಗಿತ್ವದಲ್ಲಿ ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಚುನಾವಣಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.
ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಮಾತನಾಡಿ, ಮತದಾನ ಒಂದು ಜವಾಬ್ದಾರಿಯುತ ಹಕ್ಕಾಗಿದ್ದು, ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಎಲ್ಲರೂ ಮತದಾನ ಮಾಡಬೇಕು. ಈಗಾಗಲೇ ಜಿಲ್ಲೆಯಲ್ಲಿ ಮತದಾನ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
*ಮತದಾರರ ದಿನದ ಪ್ರತಿಜ್ಞೆ ಸ್ವೀಕಾರ:* ಮತದಾನ ಜಾಗೃತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರಭಾವಿತರಾಗದೇ ಮತ ಚಲಾಯಿಸುತ್ತೇವೆ ಎಂಬುದಾಗಿ ಪ್ರತಿಜ್ಷಾ ವಿಧಿ ಸ್ವೀಕರಿಸಲಾಯಿತು.
*ರಾರಾಜಿಸಿದ ಫಲಕಗಳು:* ಪ್ರಜಾಪ್ರಭುತ್ವ ನಮ್ಮಿಂದ, ಮತ ನೀಡಿ-ಹೆಮ್ಮೆಯಿಂದ ಮತದಾನ ಒಂದು ಶಕ್ತಿ. ಒಂದು ಮತ-ನಿಮ್ಮ ಹಕ್ಕು, ನಿಮ್ಮ ಧ್ವನಿ, ನಿಮ್ಮ ಕರ್ತವ್ಯ- ತಪ್ಪದೇ ಮತ ನೀಡಿ. ಮತದಾನ ನಮಗಿರುವ ಅಧಿಕಾರಿ ಅದನ್ನು ವ್ಯರ್ಥ ಮಾಡುವುದು ಬೇಡ. ಮತದಾನದಿಂದಲೇ ಪ್ರಜಾಪ್ರಭುತ್ವ ಬಲಿಷ್ಠವಾಗುತ್ತದೆ. ಮತದಾನದಿಂದಲೇ ನಿಮ್ಮ ಸರ್ಕಾರ ರಚನೆಯಾಗುತ್ತದೆ. ಯಾವುದೇ ಮತದಾರರ ಮತದಾನದಿಂದ ಹೊರಗುಳಿಯಬಾರದು, ಓದು ವ್ಯಕ್ತಿತ್ವನ್ನು ರೂಪಿಸುತ್ತದೆ ಮತದಾನ ದೇಶವನ್ನು ರೂಪಿಸುತ್ತದೆ. ತಪ್ಪದೇ ಮತದಾನ ಮಾಡಿ, ನಾನು ಓಟ್ ಮಾಡುತ್ತೇವೆ. ನೀವು ತಪ್ಪದೇ ಓಟ್ ಮಾಡಿ ಎಂಬ ಮಾಹಿತಿ ಫಲಕಗಳನ್ನು ಶಾಲಾ-ಕಾಲೇಜು ಮಕ್ಕಳು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಹೇಮಂತ್‍ಕುಮಾರ್, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಎಸ್.ಎನ್.ರುದ್ರೇಶ್, ಪ್ರೊಬೆಷನರಿ ಐಎಎಸ್ ಅಧಿಕಾರಿ ರೂಪಿಂದರ್ ಕೌರ್, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್‍ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.
*ಮತದಾನ ಜಾಗೃತಿ ಜಾಥಾ:* ಪ್ರಜಾಪ್ರಭುತ್ವ ಹಬ್ಬ ಕಾರ್ಯಕ್ರಮ ಅಂಗವಾಗಿ ನಗರದ ಎಸ್.ಪಿ ಸರ್ಕಲ್ ಬಳಿ ಮತದಾನ ಜಾಗೃತಿ ಜಾಥಾ ಗೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಚಾಲನೆ ನೀಡಿದರು. ಜಾಥಾವು ಜಿಲ್ಲಾ ಮಕ್ಕಳ ಆಸ್ಪತ್ರೆ ಮೂಲಕ ಎಪಿಎಂಸಿ, ರೇಡಿಯೋ ಪಾರ್ಕ್, 2 ನೇ ರೈಲ್ವೇ ಗೇಟ್‍ನಿಂದ ಮೋತಿ ಬಳಿ ಅಂತ್ಯಗೊಂಡಿತು.
*ಆರೋಗ್ಯ ಇಲಾಖೆಯಿಂದ ಮತದಾನ ಜಾಗೃತಿ;* ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮತದಾನ ಜಾಗೃತಿ ಅಂಗವಾಗಿ ಜಾಥಾವು ಹಮ್ಮಿಕೊಂಡಿತ್ತು. ಜಾಥಾವು ಡೊಳ್ಳು ಕುಣಿತ ಮೂಲಕ ಜಿಲ್ಲಾ ಆಸ್ಪತ್ರೆಯಿಂದ ಆರಂಭವಾಗಿ ಸಂಗಮ್ ವೃತ್ತದ ಮೂಲಕ ಗಡಗಿ ಚೆನ್ನಪ್ಪ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಮೋತಿ ವೃತ್ತದ ಬಳಿ ತಲುಪಿತು.
ಪ್ರಜಾಪ್ರಭುತ್ವ ಹಬ್ಬ ಕಾರ್ಯಕ್ರಮದಲ್ಲಿ ಚಿಗುರು ಕಲಾ ತಂಡದಿಂದ ಮತದಾನ ಜಾಗೃತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು.