ಮತದಾನ ಪ್ರಮಾಣ ಏರಿಕೆಗೆ ತುಷಾರ್ ಸೂಚನೆ

ಬೆಂಗಳೂರು, ಮಾ.೨೬- ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನ ಪ್ರಮಾಣ ಏರಿಕೆ ಆಗಬೇಕು ಎಂದು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಹಾಗೂ ಮೇಲ್ವಿಚಾರಕರಿಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಸೂಚನೆ ನೀಡಿದ್ದಾರೆ.
ನಗರದಲ್ಲಿಂದು ಸರ್ಕಾರಿ ಕಲಾ ಕಾಲೇಜಿನಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ-೨೦೨೪ರ ಸಂಬಂಧ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಹಾಗೂ ಮೇಲ್ವಿಚಾರಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿ ಎಷ್ಟು ಮತದಾರರಿದ್ದಾರೆ ಎಂಬ ಮಾಹಿತಿ ನಿಮ್ಮ ಬಳಿ ಲಭ್ಯವಿರಲಿದ್ದು, ಅದರನುಸಾರ ಮನೆ-ಮನೆ ಭೇಟಿ ನೀಡಿ ಹೆಚ್ಚು ಮತದಾನ ಮಾಡಲು ಪ್ರೇರೇಪಿಸುವ ಕೆಲಸ ಮಾಡಬೇಕೆಂದು ಹೇಳಿದರು.
ಅದರಲ್ಲೂ ನಗರದಲ್ಲಿ ವಾಸಿಸುವ ಜನರಿಗೆ ಮತದಾನ ಮಾಡಲು ಹೆಚ್ಚು ಆಸಕ್ತಿ ಇರುವುದಿಲ್ಲ. ಈ ಸಂಬಂಧ ಮತದಾರರಲ್ಲಿ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಿ ತಪ್ಪದೆ ಮತದಾನ ಮಾಡಲು ಮನವಿ ಮಾಡಬೇಕೆಂದು ತಿಳಿಸಿದರು.
ಪ್ರಜಾಪ್ರಭುತ್ವಕ್ಕೆ ಎಲ್ಲರೂ ಮೊದಲ ಪ್ರಾಮುಖ್ಯತೆ ನೀಡಬೇಕು. ಒಂದೊಂದು ಮತಕ್ಕೂ ಸಮಾಜವನ್ನು ಬದಲಾಯಿಸುವ ಶಕ್ತಿಯಿದ್ದು, ಎಲ್ಲರೂ ಪ್ರತಿಯೊಂದು ಮತದ ಮಹತ್ವವನ್ನು ಅರಿತು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಮತದಾನ ಮಾಡುವಂತಾಗಬೇಕೆಂದು ಅವರು ಹೇಳಿದರು.
ಈ ವೇಳೆ ಸ್ವೀಪ್ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಕಾಂತರಾಜು, ಬೆಂಗಳೂರು ನಗರ ಜಿಲ್ಲೆಯ ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ನೋಡಲ್ ಅಧಿಕಾರಿ ರಮಾಮಣಿ, ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.