ಮತದಾನ ಪ್ರತಿಯೊಬ್ಬರ ಜವಾಬ್ದಾರಿ- ಸಿಇಓ

ರಾಯಚೂರು,ಮೇ.೦೫- ಸಂವಿಧಾನದ ಆಶಯಗಳನ್ನು ಪೂರೈಸುವುದು ಪ್ರತಿಯೊಬ್ಬರು ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಪ್ರಜಾಸತಾತ್ಮಕ ವ್ಯವಸ್ಥೆ ಹಾಗೂ ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಹೇಳಿದರು.
ಅವರು ನಗರದ ಹೊರವಲಯದ ರಾಯಚೂರು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ವಿಧಾನಸಭಾ ಕ್ಷೇತ್ರವಾರು ಪ್ರಕಾರ ರಾಯಚೂರು ನಗರ ಕ್ಷೇತ್ರದಲ್ಲಿ ಮತದಾನದ ಪ್ರತಿಶತ ಅತ್ಯಂತ ಕಡಿಮೆಯಾಗಿದ್ದು, ಅದರಲ್ಲೂ ಯುವಕರು ಮತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮತದಾನವೆಂಬುವುದು ದೇಶದ ಪ್ರತಿಯೊಬ್ಬ ಪ್ರಜೆಗೆ ನೀಡಲಾದ ವಿಶೇಷವಾದ ಹಕ್ಕು. ಈ ಹಕ್ಕನ್ನು ಯುವಕರು ಕಡ್ಡಾಯವಾಗಿ ಚಲಾಯಿಸಬೇಕು ಮತ್ತು ಕಡ್ಡಾಯವಾಗಿ ಮತದಾನ ಮಾಡಲು ಆಸಕ್ತಿ ತೋರಿಸುವಂತೆ ಸಲಹೆ ನೀಡಿದರು.
ಮಾರುಕಟ್ಟೆಯಲ್ಲಿ ಯಾವುದೇ ವಸ್ತುವನ್ನು ಕೊಳ್ಳುವಾಗ ಆಯ್ಕೆ ಮಾಡಿ, ಉತ್ತಮವಾದುದ್ದನ್ನು ಕೊಳ್ಳುತ್ತೇವೆ ಅದರಂತೆ ದೇಶದಲ್ಲಿ ಉತ್ತಮವಾದ ಸರ್ಕಾರವನ್ನು ರಚನೆ ಮಾಡಲು ಮತದಾನವೆಂಬ ವಿಶೇಷ ಅಧಿಕಾರವನ್ನು ಪ್ರತಿಯೊಬ್ಬರಿಗೆ ನೀಡಲಾಗಿದ್ದು, ಮತದಾನ ಮಾಡುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರು ಮುಮದಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ವಿಶ್ವನಾಥ.ಎಂ, ಪ್ರೊ.ಯರ್ರಿಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ನಾಗರಾಜ, ತಾ.ಪಂ ಇ.ಒ ರಾಮರೆಡ್ಡಿ, ವಿಶ್ವವಿದ್ಯಾಲಯದ ಅಧಿಖಾರಿಗಳಾದ ಡಾ.ಬಿರಾದಾರ, ಪ್ರೊ.ಪಿ.ಬಾಸ್ಕರ್, ನುಸರತ್ ಫಾತೀಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.