
ತುಮಕೂರು, ಮೇ ೧೦- ಮತದಾನ ಪ್ರಜಾಪ್ರಭುತ್ವದ ಹಕ್ಕು. ಹಾಗಾಗಿ ಪ್ರತಿಯೊಬ್ಬರೂ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮನವಿ ಮಾಡಿದರು. ನಗರದ ಸಿದ್ದಗಂಗಾ ಮಠದ ಆವರಣದಲ್ಲಿರುವ ಶ್ರೀ ಸಿದ್ದಲಿಂಗೇಶ್ವರ ಸನಿವಾಸ ಹಿರಿಯ ಪ್ರಾಥಮಿಕ ಪಾಠಶಾಲೆಯ ಮತಗಟ್ಟೆಗೆ ತೆರಳಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಭಾರತೀಯ ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಬಹಳ ಮಹತ್ವವಿದೆ. ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವಂತ ವ್ಯವಸ್ಥೆ ಇದಾಗಿದ್ದು, ಸಂವಿಧಾನ ಕೊಟ್ಟಿರುವ ಹಕ್ಕನ್ನು ಪ್ರತಿಯೊಬ್ಬರೂ ಚಲಾವಣೆ ಮಾಡಬೇಕು ಎಂದರು.
ಯಾರೂ ಕೂಡಾ ಮನೆಯಲ್ಲಿ ಉಳಿಯದೇ ಪ್ರಜಾಪ್ರಭುತ್ವದ ಯಶಸ್ವಿಗೆ ಮತದಾನ ಮಾಡಬೇಕು. ನ್ಯಾಯ ಮತ್ತು ಮುಕ್ತವಾದ ರೀತಿಯಲ್ಲಿ ಮತದಾನ ನಡೆಯಬೇಕು ಎಂದು ಅವರು ಹೇಳಿದರು. ನೂರಕ್ಕೆ ನೂರರಷ್ಟು ಮತದಾನ ಆಗುವಂತಹದ್ದು ಬಹಳ ಅಪರೂಪವಾಗಿದೆ. ನೂರಕ್ಕೆ ನೂರು ಮತದಾನ ಆದಾಗ ಮಾತ್ರ ಪ್ರಜಾಪ್ರಭುತ್ವದ ವ್ಯವಸ್ಥೆ ಯಶಸ್ವಿಯಾಗುತ್ತದೆ ಎಂದ ಶ್ರೀಗಳು, ನಮ್ಮ ಮತ ಅಮೂಲ್ಯವಾಗಿರುವಂತಹದ್ದು, ಯಾವುದೇ ಆಮಿಷಗಳಿಗೆ ಒಳಗಾಗುವುದು ಬಹಳ ತಪ್ಪು. ನಮ್ಮ ಮತಕ್ಕೆ ಕೋಟಿ ಕೊಟ್ಟರೂ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅಷ್ಟು ಬೆಲೆ ಬಾಳುವ ಮತವನ್ನು ಆಮಿಷಗಳಿಗೆ ಒಳಗಾಗದೇ ಚಲಾವಣೆ ಮಾಡಬೇಕು ಎಂದು ಸಲಹೆ ಮಾಡಿದರು.