ಮತದಾನ ಪ್ರಜಾಪ್ರಭುತ್ವದ ಅಡಿಗಲ್ಲು


ಸಂಜೆವಾಣಿ ವಾರ್ತೆ
ಸಂಡೂರು: ಮಾ:29:  ಮತದಾನ ಪ್ರಜಾಪ್ರಭುತ್ವದ ಅಡಿಗಲ್ಲು ಪ್ರತಿ ಮತವೂ ಸಹ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸುವ ಮತ್ತು ಸೋಲಿಸುವಂತಹ ಮಹತ್ತರ ಶಕ್ತಿಯನ್ನು ಹೊಂದಿದೆ ಎನ್ನುವುದನ್ನು ಮರೆಯದೇ ಕಡ್ಡಾಯವಾಗಿ ಮತ ಚಲಾಯಿಸಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಷಡಾಕ್ಷರಯ್ಯ ಕರೆನೀಡಿದರು.
ಅವರು ತಾಲೂಕು ಚುನಾವಣಾ ಸ್ವೀಪ್ ಸಮಿತಿವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥವನ್ನು ತಾಲೂಕು ಪಂಚಾಯಿತಿ ಅವರಣದಲ್ಲಿ ಚಾಲನೆ ನೀಡಿ ಮಾತನಾಡಿ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತವಾಗಿದೆ ಅಂತಹ ಪ್ರಜಾಪ್ರಭುತ್ವ ಉಳಿದುಕೊಂಡಿದೆ ಎಂದರೆ ಪ್ರಜೆಗಳ ಮತದಾನ ಮಾಡುವುದರಿಂದ ಅದನ್ನು ಉಳಿಸಲಾಗಿದೆ, ಅದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಸಹ ಪ್ರತಿಯೊಬ್ಬರೂ ಸಹ ಕಡ್ಡಾಯವಾಗಿ ಮತದಾನವನ್ನು ಮಾಡಬೇಕು, ಈ ಹಿಂದೆ ಸಾಧಿಸಿದ ಗುರಿಗಿಂತಲೂ ಈ ಬಾರಿ 100ಕ್ಕೆ 100 ರಷ್ಟು ಮತವನ್ನು ಚಲಾಯಿಸೋಣ, ಮತಗಟ್ಟೆಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿದೆ, ಹಿರಿಯರಿಗೆ, ಅಂಗವಿಕಲರಿಗೆ, ಮಹಿಳೆಯರಿಗೆ ನೂತನ ಮತದಾರರಿಗೆ ವಿಶೇಷವಾದ ಸೌಲಭ್ಯಗಳನ್ನು ನೀಡುವ ಮೂಲಕ ಮತಗಟ್ಟೆಗೆ ಬರುವಂತೆ ಮಾಡಲಾಗಿದೆ, ಅದ್ದರಿಂದ ಯಾರೂ ಸಹ ಮತದಾನ ಮಾಡುವುದರಿಂದ ವಂಚಿತರಾಗಬಾರದು ಎನ್ನುವ ಗುರಿಯನ್ನು ಹೊಂದಿದ್ದೇವೆ, ಅಲ್ಲದೆ ಮತದಾನ ಅದು ನಮ್ಮ ದೇಶಕ್ಕೆ, ಪ್ರಜಾಪ್ರಭುತ್ವಕ್ಕೆ ಕೊಡುವ ಅತಿ ಶ್ರೇಷ್ಠವಾದ ಕಾರ್ಯವಾಗಿದೆ, ಅದ್ದರಿಂದ ಯಾರೂ ಸಹ ಅಮೀಷಕ್ಕೆ ಒಳಗಾಗದೆ, ಒತ್ತಡಕ್ಕೆ ಮಣಿಯದೇ ನಿರ್ಭಿತಿಯಿಂದ ಮತದಾನ ಮಾಡಬೇಕು ಅದಕ್ಕೆ ಅಡಳಿತ ಯಂತ್ರ ಸದಾ ನಿಮ್ಮ ಮತದಾನ ಮಾಡಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಿದೆ, ಅದರಲ್ಲೂ ಮಹಿಳೆಯರು ಗೌರವದಿಂದ ಹೆಮ್ಮೆಯಿಂದ ಮತದಾನ ಮಾಡಿ, ಇದರಿಂದ ಪ್ರಜಾಪ್ರಭುತ್ವ ಭದ್ರವಾಗುತ್ತದೆ ಅದ್ದರಿಂದ 07.05.2014ರಂದು ನಡೆಯುವ ಮತದಾನದಲ್ಲಿ ಪ್ರತಿಯೊಬ್ಬರೂ ಮತ ಹಾಕಿ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಎಳೆ ನಾಗಪ್ಪ ಅವರು ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಮತದಾನ ಎನ್ನುವುದು ಹಬ್ಬವಿದ್ದಂತೆ ಅ ಹಬ್ಬದಲ್ಲಿ 18 ವರ್ಷ ತುಂಬಿದ ಎಲ್ಲರೂ ಭಾಗಿಯಾಗಿ ಮತದಾನ ಮಾಡಿ ಹಬ್ಬವನ್ನು ಆಚರಿಸೋಣ, ಕಾರಣ ಇದು ನಮ್ಮ ದೇಶದ ಸಂವಿಧಾನ ನಮಗೆ ಕೊಡಮಾಡಿದ ಬಹುದೊಡ್ಡ ಹಕ್ಕಾಗಿದೆ, ಇದರಿಂದ ನಮಗೆ ಬೇಕಾದ, ದೇಶವನ್ನು ಕಟ್ಟುವಂತಹ ವ್ಯಕ್ತಿಯನ್ನು ಆಯ್ಕೆಮಾಡುವ ಶಕ್ತಿ ನಿಮ್ಮ ಒಂದು ಮತಕ್ಕೆ ಇದೆ, ಅದ್ದರಿಂದ ಕಡ್ಡಾಯವಾಗಿ ಮತದಾನ ಮಾಡಬೇಕು, ಇನ್ನೂ ಯುವ ಮತದಾರರು ಯಾರಾದರೂ ನೊಂದಾಯಿಸಿಕೊಳ್ಳದೇ ಇದ್ದಲ್ಲಿ ತಕ್ಷಣ ನೊಂದಾಯಿಸಿಕೊಳ್ಳುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ಷಡಾಕ್ಷರಯ್ಯ ಅವರು ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಮೂಲಕ ಇಡೀ ಪಟ್ಟಣದಲ್ಲಿ ವಿವಿಧ ಇಲಾಖೆಯ ಸಹಯೋಗದಲ್ಲಿ ಜಾಗೃತಿ ಜಾಥವನ್ನು ನಡೆಸುವ ಮೂಲಕ ಪ್ರತಿಯೊಬ್ಬರೂ ಸಹ ಮತದಾನದಲ್ಲಿ ಭಾಗಿಯಾಗಬೇಕು, ಯಾವುದೇ ಭ್ರಷ್ಟತೆಗೆ ಒಳಗಾಗದಂತೆ ಮತ ಚಲಾಯಿಸಬೇಕು ಎಂದು ತಿಳಿಸುವ ಮೂಲಕ ಜಾಗೃತಿಯನ್ನು ಉಂಟು ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಜಯಣ್ಣ, ತಾಲೂಕು ಪಂಚಾಯಿತಿ ಅಧಿಕಾರಿಗಳಾದ ರೋಷನ್, ಜಡಿಯಪ್ಪ, ಎಂ.ಎಂ. ಭಜಂತ್ರಿ, ಅಂಗನವಾಡಿ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.