ಮತದಾನ ಪವಿತ್ರವಾದದ್ದು ತಪ್ಪದೆ ಮತ ಚಲಾಯಿಸಿ


ಲಕ್ಷ್ಮೇಶ್ವರ,ಏ.8: `ಪ್ರಜಾಪ್ರಭುತ್ವ ವ್ಯವ ಸ್ಥೆಯಲ್ಲಿ ಮತದಾರರೇ ಪ್ರಭುಗಳು. ಅವರು ಚಲಾಯಿಸುವ ಪ್ರತಿಯೊಂದು ಮತಕ್ಕೂ ಅದರದೇ ಆದ ಮೌಲ್ಯವಿದ್ದು 18 ವರ್ಷ ದಾಟಿದ ಎಲ್ಲರೂ ತಪ್ಪದೆ ಮತದಾನ ಮಾಡಿ’ ಎಂದು ಗದಗ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ ಅವರು ಹೇಳಿದರು.
ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ ಗ್ರಾಮದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಮತದಾರರ ಜಾಗೃತಿ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಭಾಗದ ಜನರ ದುಡಿಮೆಗೆ ಕೆಲಸವಿಲ್ಲ ಎಂಬ ಚಿಂತೆಯನ್ನು ಉದ್ಯೋಗ ಖಾತ್ರಿ ಯೋಜನೆ ದೂರ ಮಾಡಿದೆ. ಖಾತ್ರಿ ಯೋಜನೆಯಡಿ 316 ರೂ. ದಿನಕ್ಕೆ ಕೂಲಿ ನೀಡಲಾಗುತ್ತದೆ. ಗ್ರಾಮೀಣರು ಯೋಜನೆಯ ಲಾಭ ಪಡೆದುಕೊಳ್ಳಬೇಕು. ಕಾಮಗಾರಿ ಸ್ಥಳದಲ್ಲಿ ನೀರು, ನೆರಳು ಮತ್ತು ಪ್ರಥಮ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು. ತಾಲೂಕಿ ಪಂಚಾಯತಿ ಸಹಾಯಕ ನಿರ್ದೇಶಕ (ಗ್ರಾಉ) ಕೃಷ್ಣ ಧರ್ಮರ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಬಡವರ ಜೀವನದ ಸುಧಾರಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದೆ. ಕೂಲಿಕಾರರು ಸೂಕ್ತ ಪ್ರಮಾಣದಲ್ಲಿ ಕೆಲಸ ನಿರ್ವಹಿಸಿ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಎಂದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಅರ್ಹ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡುವ ಮೂಲಕ ದೇಶದ ಋಣ ತೀರಿಸಬೇಕು. ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವನ್ನು ನಿರ್ಮಿಸಬೇಕು. ಸುತ್ತ-ಮುತ್ತಲಿನ ಜನರಿಗೂ ಮತದಾನದ ಮಹತ್ವ ತಿಳಿಸಿಕೊಡಬೇಕು’ ಎಂದು ಸಲಹೆ ನೀಡಿದರು.
ಕಾಮಗಾರಿ ಸ್ಥಳದಲ್ಲಿ ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನದಡಿ ಆರೋಗ್ಯ ಶಿಬಿರ ಏರ್ಪಡಿಸಿ ಕೂಲಿಕಾರರ ಬಿಪಿ, ಶುಗರ್ ತಪಾಸಣೆ ಮಾಡಿ ಆರೋಗ್ಯ ಕಾಳಜಿ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ.ಆರ್. ಮಾದರ ಅವರು ಕಡ್ಡಾಯವಾಗಿ ಮತದಾನ ಮಾಡುವಂತೆ ಮತದಾರರ ಜಾಗೃತಿ ಪ್ರತಿಜ್ಞಾ ವಿಧಿ ಬೋಧಿಸಿದರು.
ತಾಪಂ ಐಇಸಿ ಸಂಯೋಜಕ ವೀರೇಶ ಬಸನಗೌಡ್ರ, ಟಿಎಂಐಎಸ್ ಚಂದ್ರಶೇಖರ ಹಳ್ಳಿ, ತಾಂತ್ರಿಕ ಸಂಯೋಜಕ ಅರುಣಕುಮಾರ ತಂಬ್ರಳ್ಳಿ, ಗ್ರಾಪಂ ಕಾರ್ಯದರ್ಶಿ ಎಸ್.ಎನ್. ಹಡಪದ, ಸಹಾಯಕ ಇಂಜಿನಿಯರ್ ಲಿಂಗರಾಜ ಅರಿಷಿಣದ, ಬಿಎಫ್‍ಟಿ ಶಿಲ್ಪಾ ಲಮಾಣಿ, ಜಿಕೆಎಂ ಇತರರಿದ್ದರು