ಮತದಾನ ಪಟ್ಟಿ ಪರಿಷ್ಕರಣೆಗೆ ಅವಕಾಶ
 ತಹಸೀಲ್ದಾರರಾದ ಬಸವರಾಜ ಮಾಹಿತಿ


ಸಂಜೆವಾಣಿ ವಾರ್ತೆ
ಕಾರಟಗಿ ನ:10: ಯಾವುದೇ ಮತದಾರರು ಮತದಾನದಿಂದ ದೂರ ಉಳಿಯಬಾರದು, 18 ವರ್ಷ ಮೇಲ್ಪಟ್ಟವರು ಮತದಾನ ಮಾಡಬೇಕು ಎಂದು ತಹಸೀಲ್ದಾರರಾದ ಬಸವರಾಜ ಅವರು ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಬಳಿ ತಾಲೂಕು ಆಡಳಿತ, ತಾಲೂಕು ಪಂಚಾಯತ, ಪುರಸಭೆ ಸಂಯುಕ್ತಾಶ್ರಯದಲ್ಲಿ
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2023 ರ ಅಭಿಯಾನ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸ್ವೀಪ್ ಜಾಥಾಕ್ಕೆ ಚಾಲನೆ ನೀಡಿದರು.
ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ವರ್ಷಕ್ಕೆ ನಾಲ್ಕು ಬಾರಿ ಅವಕಾಶ ಇರುತ್ತದೆ. ವಿ.ಎಚ್.ಎ ಆ್ಯಪ್ ನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಕುರಿತು ಖಚಿತ ಪಡಿಸಿಕೊಳ್ಳಬಹುದು ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ನರಸಪ್ಪ ಎನ್. ಅವರು ಮಾತನಾಡಿ, 18 ವರ್ಷ ಮೇಲ್ಪಟ್ಟ ಯುವಕ, ಯುವತಿಯರು ಮತದಾನ ಪಟ್ಟಿಗೆ ಹೆಸರು ನೋಂದಾಯಿಸಬೇಕು. ಹೆಸರು ಸೇರ್ಪಡೆ, ಪರಿಷ್ಕರಣೆಗೆ ಅವಕಾಶವಿದ್ದು, ಬಿಎಲ್ ಓಗಳಿಗೆ ಅಗತ್ಯ ದಾಖಲೆ ನೀಡಿ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಸಿ.ಎಂ.ಎನ್. ಕಾಲೇಜು ವಿದ್ಯಾರ್ಥಿಗಳು ಜಾಗೃತಿ ಹಿಡಿದು ಘೋಷವಾಕ್ಯಗಳನ್ನು ಕೂಗಿದರು. ಪುರಸಭೆ ಕಚೇರಿಯಿಂದ ತಹಸಿಲ್ ಕಚೇರಿವರೆಗೆ ಜಾಥಾ ನಡೆಯಿತು.
ಉಪತಹಸೀಲ್ದಾರ್ ಪ್ರಕಾಶ ನಾಯ್ಕ್, ಪುರಸಭೆ ವ್ಯವಸ್ಥಾಪಕರಾದ ಪರಮೇಶ್ವರ, ಆರೋಗ್ಯ ನಿರೀಕ್ಷಕರಾದ ಆದೆಪ್ಪ, ಚುನಾವಣಾ ಶಿರಸ್ತರೆದಾರ್ ಉಮಾಮಹೇಶ್ವರ, ಕಂದಾಯ ನಿರೀಕ್ಷಕರಾದ ಮಂಜುನಾಥ ರಾಥೋಡ್,  ಸಿ.ಎಂ.ಎನ್ . ಪದವಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ
ನಾರಾಯಣ ವೈದ್ಯ, ತಾಪಂ ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ನಗರದ ಎಲ್ಲ ಮತಗಟ್ಟೆ ಅಧಿಕಾರಿಗಳು ಇದ್ದರು.