ಮತದಾನ ನಮ್ಮ ಹಕ್ಕು, ಶಕ್ತಿ ಕೂಡ ಹೌದು


ಸಂಜೆವಾಣಿ ವಾರ್ತೆ
ಸಂಡೂರು:ಏ:4: ಮತದಾನ ಕೇವಲ ನಮ್ಮ ಹಕ್ಕಷ್ಟೇ ಅಲ್ಲ ಅದು ನಮ್ಮ ಶಕ್ತಿ ಕೂಡ ಹೌದು ಎಂದು ಸಂಡೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಂಡೂರು ತಾಲ್ಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಎಚ್. ಷಡಕ್ಷರಯ್ಯ ಅಭಿಪ್ರಾಯ ಪಟ್ಟರು..
 ಸೋಮವಾರ ಸಂಡೂರಿನಲ್ಲಿ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ, ಪುರಸಭೆ ಹಾಗೂ ಮತದಾರ ಸಾಕ್ಷರತಾ ಸಂಘ ಸಂಡೂರು ಇವುಗಳ ಸಹಯೋಗದಲ್ಲಿ ನಡೆದ ಮತದಾರ ಜಾಗೃತಿ ಕ್ಯಾಂಡಲ್ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಇವರು ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಅರ್ಹ ವ್ಯಕ್ತಿಗಳಿಗೆ ಮತದಾನ ಮಾಡಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು. ರಾಜ್ಯ ಚುನಾವಣಾ ಆಯೋಗ, ಬಳ್ಳಾರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ನಿರ್ದೇಶನದಂತೆ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಯುಕ್ತ ಮತದಾರರಲ್ಲಿ ಜಾಗೃತಿ ಮೂಡಿಸುವ ಆಶಯದೊಂದಿಗೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಅನೇಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು ಸಾರ್ವಜನಿಕರು ಕೂಡ ಇದರಲ್ಲಿ ಭಾಗವಹಿಸುವ ಮೂಲಕ ಸಹಕಾರ ನೀಡಲು ಕೋರಿದರು. ಚುನಾವಣೆಗೆ ಸಂಬಂಧಿಸಿದ ಮಾಹಿತಿಗಾಗಿ/ ದೂರುಗಳಿದ್ದಲ್ಲಿ ಟೋಲ್ ಫ್ರೀ ನಂಬರ್ 1950 ಕ್ಕೆ ಕರೆ ಮಾಡಿ ಸಲ್ಲಿಸಬಹುದು ಎಂದರು.ಅದೇ ರೀತಿ ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣು ಸಿ-ವಿಜಿಲ್ ಮೊಬೈಲ್ ಅಪ್ಲಿಕೇಶನ್ ಬಗ್ಗೆ ತಿಳಿಸಿ ಚುನಾವಣಾ ಅಕ್ರಮಗಳ ಯಾವುದೇ ದೂರುಗಳನ್ನು ತಂತ್ರಾಂಶದ ಮೂಲಕವೂ ದಾಖಲಿಸಬಹುದು ಹಾಗೂ ಸದರಿ ದೂರುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು.ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆಯುವಂತೆ ವಿನಂತಿಸಿದರು.
 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತದಾರರ ಸಾಕ್ಷರತಾ ಸಂಘದ ತಾಲೂಕು ನೋಡಲ್ ಅಧಿಕಾರಿ ಅಧಿಕಾರಿ ಜಿಎಂ ಪ್ರದೀಪ್ ಕುಮಾರ್ ಇವರು ಮತದಾನ ಸಂಭ್ರಮವಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಆದ್ದರಿಂದ ಪ್ರತಿಯೊಬ್ಬ ಅರ್ಹ ವಯಸ್ಸಿನ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು ಹಾಗೂ ಮತದಾನ ಪ್ರಕ್ರಿಯೆಯಿಂದ ಯಾರೂ ಹೊರಗುಳಿಯದಂತೆ ಪ್ರೇರೇಪಿಸಬೇಕು ಎಂದು ಹೇಳಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಶರಣಬಸಪ್ಪ ಇವರು ಮತದಾನ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಸಿಕ್ಕಿರುವ ಬಹುದೊಡ್ಡ ಅಸ್ತ್ರ ಅದನ್ನು ಬಳಸುವ ಮೂಲಕ ನಾವು ಅರ್ಹರನ್ನ ಚುನಾಯಿಸಬೇಕು ಎಂದು ತಿಳಿಸಿದರು. ಕ್ಯಾಂಡಲ್ ಜಾಥಾ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯ ಅಧಿಕಾರಿ ಖಾಜಾ ಮೈನುದ್ದಿನ್, ಪ್ರಭುರಾಜ್ ಹಗರಿ, ರೋಷನ್, ಮುತ್ತುರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತಮ್ಮಣ್ಣ, ಸಿ ಆರ್ ಪಿ ಶೇಖರ್ ಪಾಟೀಲ್, ಟಿ ಎಲ್‍ಎಮ್ ಟಿ ಮಹಾಂತೇಶ್ , ಸುಭಾನ್, ಭಾಷ್, ಮನೋಹರ್, ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಸಿಬ್ಬಂದಿ ಭಾಗವಹಿಸಿದ್ದರು.. ತಾಲೂಕಿ ನಾಧ್ಯಂತ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ದಿನ ಮತದಾನ ಜಾಗೃತಿ ಸಂಬಂಧ ಕ್ಯಾಂಡಲ್ ಜಾಥಾ / ಪಂಜು ಮೆರವಣಿಗೆ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.