
ಮುಂದಿನ ತಿಂಗಳು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಗುಂಗಿನಲ್ಲಿ ನಾವೆಲ್ಲ ಇದ್ದೇವೆ. ರಾಜಕೀಯ ಪಕ್ಷಗಳು ನೇರ ಪೈಪೋಟಿಗೆ ಇಳಿದಿವೆ. ಅವುಗಳ ಶಕ್ತಿ, ಪೈಪೋಟಿ, ಬಲಾ-ಬಲ, ಒಬ್ಬರಿಗಿಂತ ಒಬ್ಬರು ಮೇಲೆಂದು ಅಬ್ಬರದ ಪ್ರಚಾರವನ್ನು ನಾವೆಲ್ಲ ನೋಡುತ್ತಿದ್ದೇವೆ . ಚುನಾವಣಾ ದಿನ ನಿಗದಿಯಾದಂದಿನಿಂದಲೂ ಪ್ರಜೆಗಳು ಪ್ರಭುಗಳಾಗಿಯೂ, ಪ್ರಭುಗಳು ಪ್ರಜೆಗಳಾಗಿಯೂ ಬದಲಾಗಿದ್ದಾರೆ. ಅಭ್ಯರ್ಥಿಗಳು ಮತದಾರರ ಕಾಲು ಹಿಡಿದು ಬೇಡಿಕೊಂಡು ಮತಯಾಚಿಸುವ ಮಟ್ಟಕ್ಕೆ ಇಳಿದಿದ್ದಾರೆ. ಚುನಾವಣೆ ಎಂಬ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಮತದಾರ ಭಾಂದವರೇ ಪ್ರಭುಗಳು. ನಾಡಿನ, ರಾಜ್ಯದ, ರಾಷ್ಟ್ರದ ಭವಿಷ್ಯ ನಿರ್ಮಾಣದಲ್ಲಿ ಮತದಾನ ಮಹತ್ವದ ಪಾತ್ರ ನಿರ್ವಹಿಸುತ್ತದೆ. ರಾಷ್ಟ್ರದ ಬೆಳವಣಿಗೆಯೂ ಮತದಾರರಾದ ಪ್ರಜೆಗಳ ಕೈಯಲ್ಲಿದೆ. ಚುನಾವಣೆ ಪ್ರಜಾಪ್ರಭುತ್ವದ ಮುಖ್ಯ ಅಂಗವಾಗಿದೆ . ಅಬ್ರಹಾಂ ಲಿಂಕನ್ ವ್ಯಕ್ತಪಡಿಸಿರುವಂತೆ ‘ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ರೂಪಿಸಲಾದ ಸರಕಾರ ಪ್ರಜಾಪ್ರಭುತ್ವ ಸರಕಾರ’. ಜನರು ತೀರ್ಮಾನಿಸಿ ಕೊಡುವ ಅಧಿಕಾರ. ಪ್ರಜೆಗಳಿಂದ ಆರಿಸಿ ಬಂದ ಜನಪ್ರತಿನಿಧಿಗಳು ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕೆಂದು ಸಂವಿಧಾನ ತಿಳಿಸಿದೆ.ನಮ್ಮ ಸಂವಿಧಾನವು 18 ವರ್ಷ ವಯಸ್ಸು ಪೂರೈಸಿದ ಪ್ರತಿಯೊಬ್ಬನಿಗೂ ಅದು ಜಾತಿ, ಧರ್ಮ, ಬಡವ-ಶ್ರೀಮಂತ, ವಿಕಲಾಂಗ, ಬುದ್ಧಿಮಾಂದ್ಯ, ವೃದ್ಧ, ಮಹಿಳೆಯೆಂಬ ವ್ಯತ್ಯಾಸವಿಲ್ಲದೆ ಮತದಾನದ ಹಕ್ಕನ್ನು ನೀಡಿದೆ. ಅದನ್ನು ಜವಾಬ್ದಾರಿಯುತರಾಗಿ ಚಲಾಯಿಸುವುದು ಪ್ರತಿಯೊಬ್ಬ ಮತದಾರನ ಕರ್ತವ್ಯ. ಹಲವು ವಿದೇಶಿ ರಾಷ್ಟ್ರಗಳಲ್ಲಿ ಮತ ಚಲಾಯಿಸದಿರುವುದೇ ದೊಡ್ಡ ಅಪರಾಧವಾಗಿ ಪರಿಗಣಿಸಲಾಗುತ್ತದೆ. ಅದಕ್ಕಾಗಿ ಕಠಿಣ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ. ಏಕೆಂದರೆ ಮತದಾನ ಅತ್ಯಂತ ಮಹತ್ವಪೂರ್ಣವಾಗಿದೆ. 1952ರ ಎಪ್ರಿಲ್‍ನಲ್ಲಿ ನಡೆದ ಮೊದಲ ಲೋಕಸಭೆ ಚುನಾವಣೆಯ ಮೂಲಕ ಭಾರತದಲ್ಲಿ ಚುನಾವಣಾ ರೀತಿಯೂ ಪ್ರಜಾಸತ್ತಾತ್ಮಕವಾಗಿ ಜಾರಿಯಾಯಿತು. ಪ್ರತಿಯೊಬ್ಬ ವಯಸ್ಕ ಪ್ರಜೆಗೆ ಮತದಾನ ಮಾಡುವ ಮತ್ತು ಚುನಾವಣೆಯಲ್ಲಿ ಸ್ಪರ್ದಿಸುವ ಸ್ವಾತಂತ್ರ್ಯವನ್ನು ನೀಡಲಾಗಿದೆ. ಚುನಾವಣೆಯೂ ಸ್ವತಂತ್ರ ಭಾರತದ ಗಮನಾರ್ಹ ಅಂಶವಾಗಿ ಪರಿಣಮಿಸಿದೆ.ಈಗ ನಡೆಯುತ್ತಿರುವ ಚುನಾವಣೆಗಳಲ್ಲಿ ಯುವಸಮುದಾಯ ಮತ್ತು ವಿದ್ಯಾರ್ಥಿ ಸಮುದಾಯದ ಮತಗಳೇ ಹೆಚ್ಚು ಎಂಬುವುದು ವಿಶೇಷ. ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಮತದಾನವೆಂಬುವುದು ಅಖಂಡ ಪ್ರಜಾಪ್ರಭುತ್ವ ಸಮೂಹದ ಧ್ವನಿ.ಭಾರತವು ಸಮಾನತೆಯನ್ನು ಸಾರಿದ ದೇಶ. ಖೇದಕರವಾದ ವಿಷಯವೇನೆಂದರೆ, ಇತ್ತೀಚಿನ ದಿನಗಳಲ್ಲಿ ಸಮಾಜವಾದಿ ರಾಷ್ಟ್ರವಾದ ಭಾರತ ಬೇರೆಯದೇ ದೃಷ್ಟಿಕೋನದತ್ತ ವಾಲುತ್ತಿದೆ. ಡಾ. ಬಿ.ಆರ್. ಅಂಬೇಡ್ಕರ್ ರವರು ರಚಿಸಿದ ಸಂವಿಧಾನ , ಧಾರ್ಮಿಕ, ವೈಯಕ್ತಿಕ ಸಮಾನತೆಯಿಂದ ಬಾಳುವ ಸ್ವಾತಂತ್ರ್ಯವನ್ನು ನೀಡಿದೆ. ಜಾತಿ, ಧರ್ಮಗಳಾಚೆ ನಾವು ಭಾರತೀಯರು, ಸಹೋದರರು ಎಂಬ ಪರಿಕಲ್ಪನೆ ನಮಗಿದೆ. ಭಾರತವು ವಿಭಿನ್ನತೆಯಲ್ಲಿ ಏಕತೆಯನ್ನು ಸಾರಿದ ದೇಶ. ವಿಚಿತ್ರ ಮನಸ್ಸಿನ ಮನೋಭಾವನೆಯನ್ನು. ಹೊಂದಿರುವ ಜನ ಪ್ರತಿನಿಧಿಗಳಿಗೆ ಅಧಿಕಾರದ ಗದ್ದುಗೆಯನ್ನು ನೀಡುವ ಮುಂಚೆ ಮತದಾರರು ಆಲೋಚಿಸಬೇಕು. ನಾನಾ ವಿಧದ ಆಸೆ ಆಮಿಷಗಳಿಗೆ ಬಲಿಯಾಗಿ, ಹಣದ ಆಸೆಗೆ ಮತವನ್ನು ಮಾರಿಕೊಳ್ಳುವ ಮುಂಚೆ, ಬೆಲೆಬಾಳುವ ಸೀರೆ, ಪಾತ್ರೆ-ಪಗಡೆ, ಮದ್ಯ ಸಾರಾಯಿಗಳಿಗಿಂತ ನಮ್ಮ ಮತ ಬೆಲೆಬಾಳುವಂತಹದ್ದು. ನಮ್ಮ ಮತ ನಮ್ಮ ನಗರದ ಹಿತ, ನಮ್ಮ ನಾಡಿನ ಹಿತಕ್ಕಾಗಿರಬೇಕು ಎಂದು ಎಲ್ಲರೂ ಅರಿತುಕೊಳ್ಳಬೇಕು.ಮತದಾನದ ದಿನವೆಂದರೆ ಕೆಲವರಿಗೆ ನಿರ್ಲಕ್ಷ, ಇನ್ನು ಕೆಲವರು ಪ್ರವಾಸ ಹೊರಡುವುದು, ವೈಯಕ್ತಿಕ ಮೋಜಿನಲ್ಲಿ ತಲ್ಲಿನರಾಗುವುದು, ಕ್ಷುಲ್ಲಕ ಕಾರಣಕ್ಕಾಗಿ ಮತದಾನವನ್ನು ವಿರೋಧಿಸುವುದು, ಮತದಾನವನ್ನು ಒಂದು ಜವಾಬ್ದಾರಿಯುತ ಹೊಣೆಗಾರಿಕೆ ಎಂಬುವುದಾಗಿ ಪರಿಗಣಿಸದಿರುವುದು ಪ್ರಜ್ಞಾವಂತ ಸಮಾಜದ ಲಕ್ಷಣವಲ್ಲ. ನಮ್ಮ ನಿರ್ಲಕ್ಷ್ಯದಿಂದ, ನಾವು ಚಲಾಯಿಸಿದೇ ಇರುವ ಮತದಿಂದಲೋ, ಒಬ್ಬ ಭ್ರಷ್ಟ, ಅಭ್ಯರ್ಥಿ ಆಯ್ಜೆಯಾಗಿ ಬಂದರೆ ಆದರ ಹೊಣೆಗಾರರು ನಾವಾಗಿರುತ್ತೇವೆ. ನಂತರ ನಾವು ಮತದಾನ ಮಾಡಬೇಕಿತ್ತು ಎಂದು ಯೋಚಿಸಿದರೆ ಪ್ರಯೋಜನವಿಲ್ಲ ಅದಕ್ಕಾಗಿ ನಿವು ಮತ್ತೆ 5 ವರ್ಷ ಕಾಯಬೇಕಾಗುತ್ತದೆ.ಮತದಾನ ನಮ್ಮ ಹಕ್ಕು. ನಮ್ಮೂರಿನ ಭವಿಷ್ಯಕ್ಕಾಗಿ, ನಮ್ಮ ನಾಡಿನ ಭವಿಷ್ಯಕ್ಕಾಗಿ, ನಾಳೆಯ ಸಾಮರಸ್ಯ. ಜೀವನಕ್ಕಾಗಿ ಎಲ್ಲರೂ ಜವಾಬ್ದಾರಿಯುತರಾಗಿ ಮತ ಚಲಾಯಿಸಬೇಕು. ಪ್ರತಿಯೊಬ್ಬರು ಮತದಾನವು ನಮ್ಮ ಸಾಂವಿಧಾನಿಕ ಹಕ್ಕು ಅದನ್ನು ನಾವು ಚಲಾಯಿಸಬೇಕು ಎಂಬ ಜವಾಬ್ದಾರಿಯನ್ನು ಅರಿತು ಮತ ಚಲಾಯಿಸೋಣ
ವೆಂಕಟೇಶ್ ಬಾಬು ಎಸ್
ದಾವಣಗೆರೆ