ಗದಗ,ಏ5 : ಪ್ರಜಾಪ್ರಭುತ್ವವು ಜನರಿಂದ ಮತ್ತು ಜನರಿಗಾಗಿ ನಡೆಸುವ ಸರ್ಕಾರವಾಗಿದೆ. ಹಾಗಾಗಿ, ಮತದಾನ ನಮ್ಮ ಹಕ್ಕು ಮಾತ್ರವಲ್ಲದೇ ನಮ್ಮ ಕರ್ತವ್ಯವೂ ಕೂಡಾ ಆಗಿದೆ” ಅಂತಾ ತಾಲೂಕ ಪಂಚಾಯತಿ ಸಹಾಯಕ ನಿರ್ದೇಶಕ ರೀಯಾಜ್ ಖತೀಬ್ ಹೇಳಿದರು.
ರೋಣ ತಾಲೂಕಿನ ಅಮರಗೋಳ ಗ್ರಾಪಂ ಪಂಚಾಯತ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆದ ಸಮುದಾಯ ಕಾಮಗಾರಿಯ ಬದು ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಂತರ ಮಾತನಾಡಿದ ಅವರು ಕೆಲವು ಬಾರಿ ಗೆಲುವು ಅಥವಾ ಸೋಲಿನ ನಿರ್ಧಾರವು ಕೇವಲ ಒಂದು ಮತವನ್ನು ಅವಲಂಬಿಸಿರುತ್ತದೆ.
ಚುನಾವಣೆಯನ್ನು ಅರ್ಥ ಪೂರ್ಣಗೊಳಿಸುವಲ್ಲಿ ಎಚ್ಚರಿಕೆಯ ಮತ್ತು ಜಾಗೃತ ಮತದಾರರು ಪ್ರಮುಖ ಪಾತ್ರ ವಹಿಸುತ್ತಾರೆ. ಆಡಳಿತ ಯಂತ್ರವನ್ನು ಬಳಸಿಕೊಂಡು ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ದೇಶ ಮಾತ್ರವಲ್ಲ ದೇಶದ ಚುಕ್ಕಾಣಿ ಹಿಡಿಯುವ ನಾಯಕರ ಭವಿಷ್ಯವನ್ನು ಅಳೆಯುವ ಚುನಾವಣೆಯಲ್ಲಿ ನಿಮ್ಮ ಮತ ವ್ಯರ್ಥವಾಗಬಾರದು ಎಂದರು
ಈ ಬಾರಿ ಚುನಾವಣೆಯಲ್ಲಿ ಚುನಾವಣಾ ಆಯೋಗವು 80 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಹಾಗೂ ವಿಶೇಷ ಚೇತನರಿಗೆ ಮತದಾನದ ಹಕ್ಕು ಸಮರ್ಪಕವಾಗಿ ಕಲ್ಪಿಸಲು ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಪ್ರಥಮ ಬಾರಿಗೆ ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ನೀಡಿತ್ತು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಈ ಅವಕಾಶ ನೀಡಲಾಗಿದೆ ಹಾಗಾಗಿ ನಿಮ್ಮ ಮನೆಯಲ್ಲಿ ಇರುವ ಹಿರಿಯರು ಇದ್ದರೆ ಅವರಿಗೆ ಮಾಹಿತಿ ನೀಡಿ ಮತದಾನ ಮಾಡಿಸಿ ಅಂತಾ ಹೇಳಿದರು.
ನರೇಗಾ ಕೂಲಿಕಾರರಿಗೆ ಮತದಾನದ ಪ್ರತಿಜ್ಞಾ ವಿಧಿಯನ್ನು ತಾಲೂಕ ಪಂಚಾಯತ ನರೇಗಾ ತಾಂತ್ರಿಕ ಸಂಯೋಜಕರಾದ ಪ್ರವೀಣ ಸೂಡಿ ಬೋಧಿಸಿದರು. ಬಳಿಕ ಮಾತನಾಡಿದ ಅವರು, ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ದಿನವೊಂದಕ್ಕೆ 316 ರೂಪಾಯಿ ನೀಡಲಾಗುತ್ತದೆ. ಬೇಸಿಗೆಯ ಅವಧಿಯಲ್ಲಿ ಕನಿಷ್ಟ 60 ದಿನಗಳವರೆಗೆ ನರೇಗಾದಲ್ಲಿ ಕೆಲಸ ಮಾಡಿದ ಕುಟುಂಬಕ್ಕೆ 18960 ರೂಪಾಯಿ ಕೂಲಿಮೊತ್ತ ಸಿಗುತ್ತದೆ. ಈ ಹಣವನ್ನು ಕೂಲಿಕಾರರು ಮುಂಗಾರು ಆರಂಭದಲ್ಲಿ ಕೃಷಿ ಚಟುವಟಿಕೆಗಳ ಬಳಕೆಗೆ ಸಹಾಯಕವಾಗುತ್ತದೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಮರೋಳ ಗ್ರಾಮ ಪಂಚಾಯತಿ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು, ಗ್ರಾಮಸ್ಥರು ಹಾಗೂ ನರೇಗಾ ಕೂಲಿಕಾರರು ಹಾಜರಿದ್ದರು.