ಮತದಾನ ಜಾಗೃತಿ ಮೆಹಂದಿ


ರೋಣ,ಮೇ.3: ಅಬ್ಬಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಎನ್.ಆರ್.ಎಲ್.ಎಂ ಮಹಿಳಾ ಸಂಘಟನೆಗಳ ಸದಸ್ಯರು, ಅಂಗನವಾಡಿ ಕಾರ್ಯಕರ್ತರು ಗ್ರಾಮದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಮನೆಯಲ್ಲಿನ ಮಹಿಳೆಯರಿಗೆ ಕೈಯಲ್ಲಿ ಮತದಾನ ಜಾಗೃತಿ ಮೂಡಿಸುವ ಮೆಹಂದಿಯನ್ನು ಬಿಡಿಸುವ ಮೂಲಕ ಕಡ್ಡಾಯ ಮತದಾನ ಜಾಗೃತಿಯನ್ನು ಸಾರ್ವಜನಿಕರಲ್ಲಿ ಮೂಡಿಸುವ ಮೂಲಕ ವಿಶಿಷ್ಟ ಮತದಾನ ಜಾಗೃತಿ ಕಾರ್ಯಕ್ರಮ ಜರುಗಿತು.
ಗ್ರಾಮ ಪಂಚಾಯತಿಯಲ್ಲಿ 50 ಕ್ಕೂ ಹೆಚ್ಚು ಮಹಿಳೆಯರು ಒಟ್ಟೂಗೂಡಿ ಗ್ರಾಮದ ಪ್ರತಿ ಮನೆ ಮನೆಗೆ ಭೇಟಿ ನೀಡಿ ವಿವಿಧ ಘೋಷಣೆಗಳ ಬರಹ, ಅಲಂಕಾರಿಕ ಜಾಗೃತಿ ಮೂಡಿಸುವ ಚಿತ್ರಗಳು ಮತ್ತು ವಿವಿಧ ಡಿಸೈನ್ ಗಳನ್ನು ಗ್ರಾಮದ ಮಹಿಳೆಯರ ಕೈಯಲ್ಲಿ ಬಿಡಿಸುವ ಮೂಲಕ ಮೇ-7 ರಂದು ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಿದರು.
ಮೇ 7 ರಂದು ಮತದಾನ ಮಾಡು. ಚುನಾವಣಾ ಪರ್ವ ದೇಶದ ಗರ್ವ, ನನ್ನ ಮತ ನನ್ನ ಹಕ್ಕು, ನಿಮ್ಮ ಮತ ದೇಶಕ್ಕೆ ಹಿತ, ಕಡ್ಡಾಯವಾಗಿ ಮತದಾನ ಮಾಡಿ ಮತ್ತು ಮತದಾನ ನಮ್ಮ ಹಕ್ಕು ಎಂಬ ಘೋಷಣೆಗಳ ಬರಹಗಳನ್ನು ಮೆಹಂದಿ ಮೂಲಕ ಗ್ರಾಮದ ಮಹಿಳೆಯರಿಗೆ ಹಾಗೂ ತಮ್ಮ ಕೈಯಲ್ಲಿ ಬಿಡಿಸಿಕೊಂಡರು. ಮತದಾನ ಜಾಗೃತಿ ಕುರಿತಾದ ಚಿತ್ರಗಳನ್ನು ಕೈಯಲ್ಲಿ ಬಿಡಿಸಿಕೊಂಡು ಮತದಾನ ಜಾಗೃತಿ ಸಾರಿದರು. ಸಾರ್ವಜನಿಕರು ಕೂಡಾ ಮಹಿಳೆಯರು ಕೈಯಲ್ಲಿ ಬಿಡಿಸಿಕೊಂಡ ಮತದಾನದ ಚಿತ್ರಗಳನ್ನು ನೋಡಿ ಅನಂದಿಸಿದರು.
ಗ್ರಾಮದ ಮಹಿಳೆಯರಿಗಾಗಿ ಮೆಹಂದಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೋಹಿತ ಎಂ ಮಾತನಾಡಿ ಮೆಹಂದಿ ಕೈಯಲ್ಲಿ ಬಿಡಿಸಿಕೊಳ್ಳುವುದು ಮಹಿಳೆಯರಿಗೆ ಇಷ್ಟವಾದ ಕೆಲಸ. ಮತದಾನ ಜಾಗೃತಿ ಕುರಿತು ಮಹಿಳೆಯರು ವಿವಿಧ ಬರಹಗಳನ್ನು ಕೈಯಲ್ಲಿ ಬಿಡಿಸಿಕೊಂಡು ಜಾಗೃತಿ ಮೂಡಿಸುವ ಕಾರಣದಿಂದ ಪ್ರತಿ ಮನೆಗೂ ಮತದಾನ ಜಾಗೃತಿ ಮಾಡಿದಂತಾಗುತ್ತದೆ ಎಂದರು..
ಕಡ್ಡಾಯ ಮತದಾನ ಜಾಗೃತಿ ಕಾರ್ಯಕ್ರಮದಲ್ಲೂ ವಿಭಿನ್ನವಾಗಿ ಜಾಗೃತಿ ಮೂಡಿಸುವ ಕೆಲಸವನ್ನು ಮಹಿಳಾ ಸಂಘಟನೆಗಳು ಮಾಡುತ್ತಿವೆ. ಇಂದು ಅಬ್ಬಿಗೇರಿ ಹೋಬಳಿ ಮಟ್ಟದಲ್ಲಿ ಮೆಹಂದಿ ಮೂಲಕ ಮತದಾನ ಜಾಗೃತಿ ಬಗ್ಗೆ ಸಾರ್ವಜನಿಕ ರಲ್ಲಿ ತಿಳುವಳಿಕೆ ಮೂಡಿಸಿದ ಕಾರ್ಯ ಮಹಿಳಾ ಸಂಘಟನೆಗಳ ಹಾಗೂ ಎಲ್ಲಾ ಸದಸ್ಯರಿಗೂ ಖುಷಿ ತಂದಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಕಾಯಕ ಮಿತ್ರ, ಕಾಯಕ ಬಂಧುಗಳು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಸಂಜೀವಿನಿ ಒಕ್ಕೂಟದ ಸದಸ್ಯರು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.