ಮತದಾನ ಜಾಗೃತಿ ಮೂಡಿಸುತ್ತಿರುವ ವಿಶೇಷ ಚೇತನರು ಮಹಾಚೇತನರು 


ಸಂಜೆವಾಣಿ ವಾರ್ತೆ
ಸಂಡುರು :ಏ:22: ಮತದಾನ ಜಾಗೃತಿ ಮೂಡಿಸುತ್ತಿರುವ ವಿಶೇಷ ಚೇತನರು ದೈಹಿಕವಾಗಿ ಮಾತ್ರ ವಿಕಲಚೇತನರು ಆದರೆ ಮಾನಸಿಕವಾಗಿ ಮಹಾಚೇತನರು, ಮತದಾನ  ಜಾಗೃತಿ ಕಾರ್ಯದಲ್ಲಿ ಅವರ  ಭಾಗವಹಿಸುವಿಕೆ ಶ್ಲಾಘನೀಯ  ಎಂದು ಸಂಡೂರು ತಾಲ್ಲೂಕು ಪಂಚಾಯತಿ  ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಸಂಡೂರು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಶ್ರೀ ಎಚ್. ಷಡ ಕ್ಷರಯ್ಯ ಅವರು ಅಭಿಪ್ರಾಯ ಪಟ್ಟರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಬಳ್ಳಾರಿ, ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ಸಂಡೂರು ಹಾಗೂ ಪುರಸಭೆ ಸಂಡೂರು ಇವರುಗಳ ಸಹಯೋಗದಲ್ಲಿ  ಸಂಡೂರುನಲ್ಲಿ  ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ – ವಿಶೇಷ ಚೇತನರ ಟ್ರೈಸಿಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿದ ಇವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ  ವಿಶೇಷ ಚೇತನರನ್ನೊಳಗೊಡಂತೆ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು, ವಿಕಲಚೇತನರಿಗೆ ಮತದಾನ ಮಾಡಲು ಅಗತ್ಯ ಸಿದ್ಧತೆಗಳನ್ನು ಮತದಾನ ಕೇಂದ್ರಗಳಲ್ಲಿ ಈಗಾಗಲೇ ಮಾಡಲಾಗಿದೆ ಎಂದು ಹೇಳಿದರು.  ವಿಶೇಷ ಚೇತನರ ಟ್ರೈಸಿಕಲ್ ಜಾಥಾ ಕಾರ್ಯಕ್ರಮದಲ್ಲಿ ತೋರಣಗಲ್ಲು ಡಿ. ವೈ. ಎಸ್. ಪಿ. ಕಾಶಿ,  ಪುರಸಭೆ ಮುಖ್ಯಧಿಕಾರಿ ಖಾಜಾ ಮೈನುದ್ದಿನ್, ಚುನಾವಣೆ ಅಸೆಟ್  ಖರ್ಚುವೆಚ್ಚ ವೀಕ್ಷಕ  ಮಹೇಶ್ ಗೌಡ, ಇಲಾಖೆ ಂ.ಇ.ಇ ಕೃಷ್ಣನಾಯ್ಕ, ಸಿಡಿಪಿಒ ಎಲಿ ನಾಗಪ್ಪ, ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ (ಪಂಚಾಯತ್ ರಾಜ್ ) ದುರುಗಪ್ಪ, ಸಿಬ್ಬಂದಿ ಜಡಿಯಪ್ಪ, ಮುತ್ತುರಾಜ್, ತಿಮ್ಮಪ್ಪ, ಪ್ರಭುರಾಜ್ ಹಗರಿ, ಸಹಾಯಕ ಪ್ರಾಧ್ಯಾಪಕ ಕಿಶೋರ್, ಎಂ. ಆರ್. ಡಬ್ಲು.  ಕರಿಬಸಜ್ಜ  ಸಿ ಹಾಜರಿದ್ದರು. ಸಂಡೂರು ತಾಲೂಕು ಮತದಾರ ಸಾಕ್ಷರತಾ ಕೇಂದ್ರದ ತಾಲೂಕು ನೋಡಲ್ ಅಧಿಕಾರಿ ಜಿ. ಎಮ್. ಪ್ರದೀಪ್ ಕುಮಾರ್, ಮತದಾರ ಪ್ರತಿಜ್ಞಾವಿಧಿ ಬೋಧಿಸಿದರು. ಪಟ್ಟಣದಲ್ಲಿ ಮತದಾನ ಜಾಗೃತಿ ಸಾರುವ ಫಲಕಗಳೊಂದಿಗೆ  ಸಂಡೂರು ಪಟ್ಟಣದ ವಿಶೇಷ ಚೇತನರೊಂದಿಗೆ ಮತದಾನ ಜಾಗೃತಿ ಜಾಥಾ ನಡೆಸಲಾಯಿತು.