ಮತದಾನ ಜಾಗೃತಿ: ಬೈಕ್ ರ್ಯಾಲಿ

ಬ್ಯಾಡಗಿ, ಏ13: ಮತದಾನದ ಹಕ್ಕು ಪ್ರಜೆಗಳ ಅತ್ಯಂತ ಜವಾಬ್ದಾರಿ ಕಾರ್ಯವಾಗಿದ್ದು, ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಬೇಕೆಂದು ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಜಿಪಂ ಉಪ ಕಾರ್ಯದರ್ಶಿ ಎಸ್.ವಿ.ಮುಳ್ಳಳ್ಳಿ ತಿಳಿಸಿದರು.
ಪಟ್ಟಣದ ತಾಲೂಕ ಪಂಚಾಯತ ಆವರಣದಲ್ಲಿ ತಾಲೂಕಾ ಸ್ವೀಪ್ ಸಮೀತಿ, ತಾಲೂಕು ಪಂಚಾಯತಿ ಹಾಗೂ ಪುರಸಭೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಮೋಟಾರ್ ಬೈಕ್ ರ್ಯಾಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾನ ಪವಿತ್ರವಾದುದಾಗಿದ್ದು, ಭಾರತ ಸಂವಿಧಾನ ಸಾರ್ವಜನಿಕರಿಕೆ ನೀಡಿದ ಪರಮೋಚ್ಛ ಅಧಿಕಾರ ಎಂದರೆ ಅದು ಮತದಾನ ಹಕ್ಕು ಎಂದರಲ್ಲದೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಬೇಕಾದ ಉತ್ತಮ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲು ಪ್ರತಿಯೊಬ್ಬರಿಗೂ ಹಕ್ಕಿದೆ ಎಂದರು.
ತಾಲೂಕ ಪಂಚಾಯತ ಆವರಣದಿಂದ ಪುರಸಭೆಯ ಕಚೇರಿಯವರೆಗೂ ತೆರಳಿದ ಮೋಟಾರ್ ಬೈಕ್ ರ್ಯಾಲಿಯ ಸಂದರ್ಭದಲ್ಲಿ “ನಿಮ್ಮ ಮತ, ನಿಮ್ಮ ಹಕ್ಕು,” ಜಾಗೃತ ಮತದಾರ, ಸದೃಢ ಪ್ರಜಾಪ್ರಭುತ್ವ, ನಿಮ್ಮ ಮತ ಗೌಪ್ಯವಾಗಿರಲಿ, ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ, ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ, ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ, ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೆ ನಿರ್ಭೀತಿಯಿಂದ ಮತ ಚಲಾಯಿಸಿ, ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತ ಪಡಿಸಿಕೊಂಡು ಮತದಾನ ಮಾಡಿ’ ಎಂಬ ಘೋಷ ವಾಕ್ಯಗಳು ಮೊಳಗಿದವು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎನ್.ತಿಮ್ಮಾರೆಡ್ಡಿ, ತಾಲೂಕಾ ನೌಕರರ ಸಂಘದ ಅಧ್ಯಕ್ಷ ಎಂ.ಎಫ್.ಕರಿಯಣ್ಣನವರ, ತಾಪಂ ವ್ಯವಸ್ಥಾಪಕ ಪ್ರಕಾಶ ಹಿರೇಮಠ, ಸತೀಶ ಮೂಡೇರ, ತಾಲೂಕಾ ಮಟ್ಟದ ವಿವಿಧ ಇಲಾಖಾಧಿಕಾರಿಗಳು, ಪಿಡಿಓಗಳು, ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.