
ಸಂಜೆವಾಣಿ ವಾರ್ತೆ
ಸಂಡೂರು: ಏ:12: ಮತದಾನ ಜಾಗೃತಿ ಮೂಡಿಸುವ ಕಾರ್ಯ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಆದ್ಯ ಕರ್ತವ್ಯ ಅದಕ್ಕಾಗಿ ಸರ್ಕಾರದಿಂದಲೂ ಸಹ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಕಡ್ಡಾಯವಾಗಿ ಮತದಾನ ಮಾಡಿ ಉತ್ತಮ ಪ್ರತಿನಿಧಿಯನ್ನು ಆಯ್ಕೆಮಾಡಿ ಎಂದು ತಾಲೂಕು ಚುನಾವಣಾಧಿಕಾರಿ ಶರಣಬಸಪ್ಪ ತಿಳಿಸಿದರು.
ಅವರುಪಟ್ಟಣದ ಪುರಸಭೆಯ ಬಸ್ ನಿಲ್ದಾಣದಲ್ಲಿ ಸ್ವ ಸಹಾಯ ಸಂಘದೊಂದಿಗೆ ಸಂಡೂರಿನಲ್ಲಿ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ, ಪುರಸಭೆ ಹಾಗೂ ಮತದಾರ ಸಾಕ್ಷರತಾ ಸಂಘ ಸಂಡೂರು ಇವುಗಳ ಸಹಯೋಗದಲ್ಲಿ ಮತದಾರ ಜಾಗೃತಿ ಸಂಬಂಧ ನಡೆದ ಸ್ವಸಹಾಯ ಸಂಘಗಳ ಸದಸ್ಯರ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡುವಂತೆ ಸ್ವ ಸಹಾಯ ಸಂಘಗಳ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಡೂರು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಷಡಕ್ಷರಯ್ಯ ಇವರು ಮಾತನಾಡಿ ರಾಜ್ಯ ಚುನಾವಣಾ ಆಯೋಗ, ಬಳ್ಳಾರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ನಿರ್ದೇಶನದಂತೆ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಯುಕ್ತ ಮತದಾರರಲ್ಲಿ ಜಾಗೃತಿ ಮೂಡಿಸುವ ಆಶಯದೊಂದಿಗೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಅನೇಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು ಸಾರ್ವಜನಿಕರು ಕೂಡ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಹಕಾರ ನೀಡಲು ಕೋರಿದರು. ಅಲ್ಲದೆ ಸಂಡೂರು ತಾಲೂಕಿನಲ್ಲಿ ಉತ್ತಮ ರೀತಿಯಲ್ಲಿ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮಗಳು ನೆರವೇರುತ್ತಿದ್ದು ವಿವಿಧ ಸಂಘ ಸಂಸ್ಥೆಗಳು ಈ ಕಾರ್ಯದಲ್ಲಿ ಕೈಜೋಡಿಸುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನ ಮತದಾನ ಪ್ರಮಾಣ ಹೆಚ್ಚಳವಾಗುವಲ್ಲಿ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತದಾರರ ಸಾಕ್ಷರತಾ ಸಂಘದ ತಾಲೂಕು ನೋಡಲ್ ಅಧಿಕಾರಿ ಅಧಿಕಾರಿ ಜಿಎಂ ಪ್ರದೀಪ್ ಕುಮಾರ್ ಇವರು ನಿಗದಿತ ವೇಳಾಪಟ್ಟಿಯಂತೆ ಮುಂದಿನ ದಿನಗಳಲ್ಲಿ ಎತ್ತಿನ ಬಂಡಿ ಉತ್ಸವ, ರಂಗೋಲಿ ಸ್ಪರ್ಧೆ, ಬೀದಿ ನಾಟಕ, ಅಂಗನವಾಡಿ ಕಾರ್ಯಕರ್ತೆಯರ ಜಾಥಾ ಕಾರ್ಯಕ್ರಮ, ವಿಕಲಚೇತನರ ತ್ರಿಚಕ್ರವಾಹನ ಜಾಥಾ, ಮ್ಯಾರಥಾನ್ ಓಟ, ವೋಟರ್ಸ್ ಕಪ್ ಸ್ಪರ್ಧೆಗಳು ಮೊದಲಾದ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಳ್ಳುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸುವಂತೆ ಕೋರಿದರು. ಜಾಥಾ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯ ಅಧಿಕಾರಿ ಖಾಜಾ ಮೈನುದ್ದಿನ್, ನರೇಗಾ ಸಹಾಯಕ ನಿರ್ದೇಶಕ ರೇಣುಕಾಚಾರ್ಯ ಸ್ವಾಮಿ, ಪ್ರಭುರಾಜ್ ಹಗರಿ, ರೋಷನ್, ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಸಿಬ್ಬಂದಿ, ಕೃಷ್ಣ ನಗರ ಹಾಗೂ ಸುಶೀಲ ನಗರ ಗ್ರಾಮ ಪಂಚಾಯಿತಿ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ಭಾಗವಹಿಸಿದ್ದರು.. ತಾಲೂಕಿನಾಧ್ಯಂತ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ದಿನ ಮತದಾನ ಜಾಗೃತಿ ಸಂಬಂಧ ಸ್ವ ಸಹಾಯ ಸಂಘಗಳ ಸದಸ್ಯರಿಂದ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಟಿ ಎಲ್‍ಎಮ್ ಟಿ ಮಹಾಂತೇಶ್ ಮತದಾರರ ಪ್ರತಿಜ್ಞಾವಿಧಿ ಭೋಧಿಸಿದರು.