ಮತದಾನ ಜಾಗೃತಿ ಜಾಥಾ

ನರಗುಂದ,ಏ12 : ಮೇ-10 ರ ಮತದಾನದ ದಿನದಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ನರಗುಂದ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣೆ ಅಧಿಕಾರಿಗಳು ಹಾಗೂ ನರಗುಂದ ತಹಶೀಲ್ದಾರ ಎ.ಡಿ.ಅಮರವಾಡಗಿ ಹೇಳಿದರು.
ನರಗುಂದ ನಗರದಲ್ಲಿ ಗದಗ ಜಿಲ್ಲಾ ನಗರಾಭಿವೃಧ್ಧಿ ಕೋಶ, ಸ್ವೀಪ್ ಸಮಿತಿ ಗದಗ ಹಾಗೂ ತಾಲೂಕು ಆಡಳಿತ ಮತ್ತು ಪುರಸಭೆ ನರಗುಂದ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರಿಗೆ ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಈ ಬಗ್ಗೆ ತಾಲೂಕಿನಾದ್ಯಂತ ತಾಲೂಕು ಸ್ವೀಪ್ ಸಮಿತಿ ವತಿಯಿಂದ ವಿವಿಧ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಈ ಭಾರಿ ಮತದಾನ ಪ್ರಮಾಣ ಹೆಚ್ಚಳ ಮಾಡುವ ಉದ್ದೇಶದಿಂದ ಚುನಾವಣೆ ಆಯೋಗ ಹಿರಿಯ ನಾಗರೀಕರಿಗೆ ಮತ್ತು ಅಂಗವಿಕಲರಿಗೆ ವಿಶೇಷ ಸೌಲಭ್ಯವನ್ನು ಕಲ್ಪಿಸಿದೆ. ಮನೆಯಲ್ಲೇ ಕುಳಿತು ತಮ್ಮ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಿದೆ. ಇದರ ಸದುಪಯೋಗಪಡಿಸಿಕೊಂಡು ಮತದಾರರು ಕಡ್ಡಾಯವಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಕರೆ ನೀಡಿದರು.
ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲೂಕು ಪಂಚಾಯತ ನರಗುಂದದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಮಂಜುಳಾ ಹಕಾರಿ ಅವರು, ಸಾರ್ವಜನಿಕರು ಮತದಾನದಿಂದ ತಪ್ಪಿಸಿಕೊಳ್ಳದೇ ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಕಡ್ಡಾಯವಾಗಿ ಮತ ಚಲಾಯಿಸಿಬೇಕೆಂದು ತಿಳಿಸಿದರು.
ಕಡ್ಡಾಯ ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ ವಿವಿಧ ಇಲಾಖೆಗಳ ಸಿಬ್ಬಂದಿಗಳಿಗೆ ತಾಲೂಕು ಸ್ವೀಪ್ ಸಮಿತಿ ಸದಸ್ಯ ಸುರೇಶ ಬಾಳಿಕಾಯಿ ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ನಗರದ ಪುರಸಭೆ ಮುಖ್ಯ ಕಚೇರಿಯಿಂದ ಮತದಾನ ಜಾಗೃತಿ ಜಾಥಾ ಆರಂಭವಾಗಿ ನಗರದ ಮಾರ್ಕೆಟ್ ಮುಖ್ಯ ರಸ್ತೆ ಮೂಲಕ ಸಂಚರಿಸಿ ನಗರದ ಶಿವಾಜಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಲ್ಲಿ ಕಡ್ಡಾಯ ಮತದಾನ ಕುರಿತು ಘೋಷಣೆಗಳ ಮೂಲಕ ಜಾಗೃತಿ ಮೂಡಿಸಲಾಯಿತು.
ಜಾಗೃತಿ ಜಾಥಾದಲ್ಲಿ ಪುರಸಭೆ ಮುಖ್ಯ ಅಧಿಕಾರಿ ಅಮಿತ್ ತೇರದಾಳ್, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷರು ಸಂಗಮೇಶ ಬ್ಯಾಳಿ, ಸಂತೋಷಕುಮಾರ್ ಪಾಟೀಲ್, ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ), ಶ್ರೀಮತಿ ಕೃಷ್ಣಮ್ಮ ಹಾದಿಮನಿ, ಸಹಾಯಕ ನಿರ್ದೇಶಕರು(ಪಂಚಾಯತ್ ರಾಜ್), ತಾಲೂಕಿನ 13 ಗ್ರಾಮ ಪಂಚಾಯತಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸಿಬ್ದಂದಿಗಳು, ಎನ್.ಸಿ.ಸಿ. ವಿದ್ಯಾರ್ಥಿಗಳು, ಪರುಸಭೆ ಮತ್ತು ತಾಲೂಕು ಪಂಚಾಯತ ಸಿಬ್ಬಂದಿ ವರ್ಗ ಹಾಜರಿದ್ದರು.