ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ

ಬಾಗಲಕೋಟೆ,ಮಾ30 : ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಬಾದಾಮಿ ನಗರದ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ಮತದಾನ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಬಾದಾಮಿ ತಾಲೂಕಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನವು ಪಿಕಾರ್ಡ ಬ್ಯಾಂಕ್ ಆವರಣದಿಂದ ಪ್ರಾರಂಭವಾಗಿ ನಾನಾ ಕಡೆ ಸಂಚರಿಸಿ ಮುಖ್ಯ ರಸ್ತೆಯ ಮೂಲಕ ತಾಲೂಕಾ ಪಂಚಾಯತ ಕಾರ್ಯಾಲಯಕ್ಕೆ ಮುಕ್ತಾಯಗೊಂಡಿತು.
ಜಾಥಾದಲ್ಲಿ ಪುರಸಭೆ ಪೌರಕಾರ್ಮಿಕರು ಮತದಾನ ಜಾಗೃತಿಯ ಘೋಷಣಾ ಫಲಕಗಳನ್ನು ಹಿಡಿದುಕೊಂಡು ಜಾಥಾದೂದ್ದಕ್ಕು ಘೋಷಣೆಗಳನ್ನು ಕೂಗಿದರು. ಸ್ವಚ್ಛ ವಾಹಿನಿಗಳಲ್ಲಿ ಧ್ವನಿವರ್ಧಕದ ಮೂಲಕ ಮತದಾನದ ಮಹತ್ವವನ್ನು ಸಾರಲಾಯಿತು.
ತಾಲೂಕಾ ಪಂಚಾಯತ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ನೆರೆದ ಜನರ ಗಮನ ಸೆಳೆಯಲಾಯಿತು. ಜಾನಪದ ಕಲಾವಿದರು ಮತದಾನ ಜಾಗೃತಿ ಕುರಿತು ಕಲಾತಂಡಗಳಿಂದ ನೃತ್ಯ ಹಾಗೂ ಬೀದಿನಾಟಕ ಜರುಗಿತು.
ಪ್ರಾರಂಭದಲ್ಲಿ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ಮತದಾನ ಜಾಗೃತಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜಾಥಾದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಸಹಾಯಕ ಚುನಾವಣಾಧಿಕಾರಿ ಡಾ.ದುರ್ಗೇಶ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿ.ಪಂ ಯೋಜನಾ ನಿರ್ದೇಶಕ ಶಶಿಕಾಂತ ಶಿವಪುರೆ, ತಹಶೀಲ್ದಾರ ಜೆ.ಬಿ.ಮಜ್ಜಗಿ ತಾ.ಪಂ.ಇಒ ಮಲ್ಲಿಕಾರ್ಜುನ ಬಡಿಗೇರ, ಮುಖ್ಯಾಧಿಕಾರಿ ಡಿ.ಸುಧಾಕರ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಘಟಪ್ರಭಾ ನದಿಗೆ 2.20 ಟಿಎಂಸಿ ನೀರು ಬಿಡುಗಡೆ
ಬಾಗಲಕೋಟೆ,ಮಾ30 : ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 2.20 ಟಿ.ಎಂಸಿ ನೀರನ್ನು ಎಪ್ರೀಲ್ 1 ರಂದು ಸಂಜೆ 6 ರಿಂದ ಬಿಡುಗಡೆಗೊಳಿಸುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬಾಗಲಕೋಟೆಗೆ ಪಟ್ಟಣಕ್ಕೆ ಕುಡಿಯುವ ಉದ್ದೇಶಕ್ಕಾಗಿ ಮೀಸಲಿಟ್ಟ 5 ಟಿಎಂಸಿ ನೀರಿನ ಪೈಕಿ ಬಾಕಿ ಉಳಿದಿರುವ 2.325 ಟಿ.ಎಂಸಿ ನೀರಿನಲ್ಲಿ 1.20 ಟಿ.ಎಂ.ಸಿ ನೀರನ್ನು ಬಾಗಲಕೋಟೆ ಕೋಟಾಕ್ಕೆ ಪರಿಗಣಿಸಿ, ಸದರಿ ನೀರನ್ನು ಹಂತ ಹಂತವಾಗಿ ಅಥವಾ ಬಿಡುಗಡೆಗೊಳಿಸಿದ ಬಾಗಲಕೋಟೆ ಕೋಟಾದ 1.20 ಟಿ.ಎಂಸಿ ನೀರು ಬಾಗಲಕೋಟೆ ಪಟ್ಟಣಕ್ಕೆ ನೀರು ಪೂರೈಸುವ ಬನ್ನಿದಿನ್ನಿ ಬ್ಯಾರೇಜ ತಲುಪಿ ನೀರು ಸಂಗ್ರಹಗೊಳ್ಳುವವರೆಗೆ ಇದರಲ್ಲಿ ಯಾವುದು ಮೊದಲು ಅದನ್ನು ಪರಿಗಣಿಸಿ ಒಟ್ಟು 2.20 ಟಿ.ಎಂಸಿ ನೀರನ್ನು ಬಿಡುಗಡೆ ಮಾಡಲು ಆದೇಶದಲ್ಲಿ ತಿಳಿಸಿದ್ದಾರೆ.
ಹಿಡಕಲ್ ಜಲಾಶಯದಿಂದ ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ನೀರನ್ನು ಹರಿಬಿಡುವಂತೆ ಹಾಗೂ ಬೇರಾವುದೇ ಉದ್ದೇಶಕ್ಕಾಗಲಿ, ಬೇರೆ ಕಾಲುವೆ ಮೂಲಕವಾಗಲಿ ನೀರನ್ನು ಹರಿಬಿಡದಂತೆ ನೋಡಿಕೊಳ್ಳಲು ಮತ್ತು ನೀರು ಪೋಲಾಗದಂತೆ ಕಟ್ಟುನಿಟ್ಟಿನ ಕ್ರಮವಹಿಸಲು ಮತ್ತು ಅನಧಿಕೃತ ಪಂಪಸೆಟ್ ಕಂಡುಬಂದಲ್ಲಿ ಕರ್ನಾಟಕ ನೀರಾವರಿ ಕಾಯ್ದೆ 1965 ರಂತೆ ಕ್ರಮಕೈಗೊಳ್ಳಲು ಹಿಡಕಲ್ ಡ್ಯಾಮ್‍ನ ಅಧೀಕ್ಷಕ ಅಭಿಯಂತರರಿಗೆ ಆದೇಶದಲ್ಲಿ ಸೂಚಿಸಿದ್ದಾರೆ.
ಮಹಾಲಕ್ಷ್ಮೀ ಏತ ನೀರಾವರಿ ಮೂಲಕ 0.26 ನೀರು ಬಿಡುಗಡೆ
ಬೀಳಗಿ ಹಾಗೂ ಮುಧೋಳ ತಾಲೂಕಿನ ಮಂಟೂರು ಮಹಾಲಕ್ಷ್ಮೀ ನೀರಾವರಿ ಯೋಜನೆಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ಹತ್ತಿರ ಕೃಷ್ಣಾ ನದಿಯ ಹಿನ್ನೀರಿನಿಂದ 0.26 ಟಿ.ಎಂಸಿ ನೀರನ್ನು ಉಪಯೋಗಿಸಲು ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.
ಮಂಟೂರು ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯಿಂದಾಗಿ ವಿವಿಧ ಬರ ಪೀಡಿತ ಪ್ರದೇಶಗಳಲ್ಲಿ ನೀರಿನ ಭವಣೆಯನ್ನು ನಿವಾರಿಸಲು ಮತ್ತು ಕುಡಿಯುವ ನೀರಿನ ಅವಲಂಬಿತ ಜನ-ಜಾನುವಾರುಗಳಿಗೆ ಈ ಯೋಜನ ಅನುಕೂಲವಾಗುತ್ತಿರುವದರಿಂದ ಪ್ರಾಯೋಗಿಕ ಚಾಲನೆಗಾಗಿ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ಬಳಕೆಗಾಗಿ ಆಲಮಟ್ಟಿ ಹಿನ್ನೀರಿನಲ್ಲಿ ಕಾಯ್ದಿರಿಸಲಾದ ಒಟ್ಟು 2 ಟಿಎಂಸಿ ನೀರಿನ ಪೈಕಿ ಬಾಕಿ ಉಳಿದಿರುವ 1.21 ಟಿಎಂಸಿ ನೀರಿನಲ್ಲಿ 0.26 ಟಿ.ಎಂಸಿ ನೀರನ್ನು 10 ದಿನಗಳ ಅವಧಿಗೆ ಎಪ್ರೀಲ್ 1 ರಿಂದ ಸಂಜೆ 6 ಗಂಟೆಯಿಂದ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಉಪಯೋಗಿಸಲು ಆದೇಶದಲ್ಲಿ ಅನುಮತಿ ನೀಡಿದ್ದಾರೆ.