ಮತದಾನ ಜಾಗೃತಿ ಕುರಿತ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ಮತದಾನ ಹೆಚ್ಚಳಕ್ಕೆ ಅಗತ್ಯ ಕ್ರಮವಹಿಸಿ : ಜಿಪಂ ಸಿಇಓ ಗರಿಮಾ ಪನ್ವಾರ

ಯಾದಗಿರಿ : ಏ, 08: ಜಿಲ್ಲೆಯ ಪ್ರತಿ ಮತದಾನ ಕೇಂದ್ರಗಳಲ್ಲಿ ಶೇ.100 ರಷ್ಟು ಮತದಾನವಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲೂಕ ಸ್ವೀಪ್ ಸಮಿತಿಗಳು ಗ್ರಾಮೀಣ ಭಾಗದ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ವಿನೂತನ ಚಟುವಟಿಕೆಗಳನ್ನು ಹಮ್ಮಿಕೊಂಡು ಮತದಾನ ಪ್ರಮಾಣ ಹೆಚ್ಚಳಕ್ಕೆ ಅಗತ್ಯ ಕ್ರಮವಹಿಸಿ ಎಂದು ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಗರಿಮಾ ಪನ್ವಾರ ಅವರು ಹೇಳಿದರು.

 ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಪಂ ಯಾದಗಿರಿ ಇವರ ಸಹಯೋಗದಲ್ಲಿ ಏ.05ರಂದು ಯಾದಗಿರಿ ತಾಪಂನಲ್ಲಿ  ಸ್ವೀಪ್ ಚಟುವಟಿಕೆಗಳಡಿ ಮತದಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡ ಸಹಿ ಸಂಗ್ರಹಣ ಅಭಿಯಾನಕ್ಕೆಚಾಲನೆ ನೀಡಿ, ಅವರು ಮಾತನಾಡಿದರು.
 ಕರ್ನಾಟಕ ವಿದಾನಸಭಾ ಸಾರ್ವತ್ರಿಕ ಚುನಾವಣೆ-2023ರ ಮೇ 10ರಂದು ನಡೆಯುವ ಚುನಾವಣೆಗಳಲ್ಲಿ ಮತದಾರರ ಪಟ್ಟಿಯಲ್ಲಿರುವ ಎಲ್ಲ ಮತದಾರರು ತಮ್ಮ ಮತ ಚಲಾಯಿಸಬೇಕು. ಯಾವುದೇ ಮತದಾರ ತನ್ನ ಮತ ಚಲಾವಣೆಯಿಂದ ಹೊರಗುಳಿಯಬಾರದು. ಮತದಾನ ಪ್ರತಿಯೊಬ್ಬ ಭಾರತಿಯನ ಸಂವಿಧಾನಾತ್ಮಕ ಹಕ್ಕು ಅದನ್ನು ಚಲಾಯಿಸುವಂತೆ ಮತದಾರರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ಹೇಳಿದರು.
 ಇದೇ ವೇಳೆ ಯಾದಗಿರಿ ತಾಲೂಕ ಪಂಚಾಯಿತಿ ಆವರಣದ ಗೊಡೆಗೆ ಮತದಾನದ ಕುರಿತು ಜಾಗೃತಿ ಮೂಡಿಸುವ ನನ್ನ ಮತ ನನ್ನ ಆಯ್ಕೆ, ನನ್ನ ಆಯ್ಕೆಯನ್ನು ಯಾರು ನಿಭರ್ಂದಿಸಲಾರರು ಎನ್ನುವ ಸಂದೇಶ ಹೊತ್ತ ಗರುಡ ಪಕ್ಷಿಯ ರೆಕ್ಕೆಯ ಚಿತ್ರಕಲೆಯನ್ನು ವೀಕ್ಷಿಸಿ, ಸಹಿ ಸಂಗ್ರಹ ಅಭಿಯಾನದಲ್ಲಿ ಸ್ವ ಹಸ್ತಾಕ್ಷಣ ನೀಡಿದರು.

 ಬಳಿಕ ತಾಪಂ ಸಭಾಂಗಣದಲ್ಲಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಲಿಂಗಾಧಾರಿತ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಲಿಂಗತ್ವ ಮತ್ತು ಆಹಾರ, ಪೌಷ್ಠಿಕಾಂಶ, ಆರೋಗ್ಯ, ನೀರು ಮತ್ತು ನೈರ್ಮಲ್ಯ ಕುರಿತು ಹಮ್ಮಿಕೊಂಡ ಎರಡು ದಿನಗಳ ತರಬೇತಿ ಕಾರ್ಯಗಾರ ಉದ್ಘಾಟಿಸಿ, ಮಾತನಾಡಿದರು.
 ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದಲ್ಲಿ ಲಿಂಗಾಧಾರಿತ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡುವ ತಾವು ಗ್ರಾಮದಲ್ಲಿನ ಮತದಾರರ ಕುರಿತು ಸಂಪೂರ್ಣ ಮಾಹಿತಿ ಪಡೆದು, ಪ್ರತಿ ಮನೆ-ಮನೆಗೆ ಭೇಟಿ ನೀಡಿ, ಮತದಾನ ಮಾಡುವಂತೆ ಜನರಲ್ಲಿ ಮನವರಿಕೆ ಮಾಡುವಂತೆ ತಿಳಿಸಿದರು.
 ಈ ವೇಳೆ ಯಾದಗಿರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ, ಸಹಾಯಕ ನಿರ್ದೇಶಕ ಖಾಲಿದ್ ಅಹ್ಮದ್, ತಾಲೂಕ ಯೋಜನಾಧಿಕಾರಿ ಶಶಿಧರ ಹಿರೇಮಠ, ಅಕ್ಷರದಾಸೋಹ ಸಹಾಯಕ ನಿರ್ದೇಶಕರು, ವ್ಯವಸ್ಥಾಪಕರಾದ ಶಿವರಾಯ, ನರೇಗಾ ವಿಷಯ ನಿರ್ವಾಹಕರಾದ ಅನಸರ ಪಟೇಲ್, ಸಿಡಿಪಿಒ ಲಾಲಸಾಬ, ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ತಾಲೂಕ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ತಾಪಂ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.