ಮತದಾನ ಜಾಗೃತಿ ಕುರಿತ ಏಕವ್ಯಕ್ತಿ ವ್ಯಂಗ್ಯ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

ವಿಜಯಪುರ:ಎ.21: ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯತ್ ವಿಜಯಪುರ ಇವರ ಸಹಯೋಗದಲ್ಲಿ ಗುರುವಾರ ನಗರದ ಲಾಲಬಹಾದ್ದೂರ ಶಾಸ್ತ್ರೀ ಮಾರುಕಟ್ಟೆಯಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಕುರಿತ ಏಕವ್ಯಕ್ತಿ ವ್ಯಂಗ್ಯ ಚಿತ್ರಕಲಾ ಪ್ರದರ್ಶನಕ್ಕೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಪಿ.ಎಸ್.ವಸ್ತ್ರದ ಹಾಗೂ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ರಾಹುಲ್ ಶಿಂಧೆ ಅವರು ಚಾಲನೆ ನೀಡಿದರು.

ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇಂದು ವ್ಯಂಗ್ಯ ಚಿತ್ರಕಲೆ ಮೂಲಕ ಮತದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಪ್ರದರ್ಶನದಲ್ಲಿ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಪಿ.ಎಸ್.ವಸ್ತ್ರದ ಅವರು ಮಾತನಾಡಿ, ಮತಗಟ್ಟೆ ಕೇಂದ್ರಗಳಲ್ಲಿ ಮತದಾನಕ್ಕೆ ಆಗಮಿಸುವ ಮತದಾರರು ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ಮತದಾರರ ಅನುಕೂಲಕ್ಕಾಗಿ ಶಾಮಿಯಾನ, ನೆರಳು, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಮತಗಟ್ಟೆಗಳಲ್ಲಿ ಕಲ್ಪಿಸಲಾಗುತ್ತಿದ್ದು, ಪ್ರತಿಯೊಬ್ಬ ಅರ್ಹ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಕೈಜೋಡಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಹಿ ಸಂಗ್ರಹ ಅಭಿಯಾನ, ಮತದಾನ ಜಾಗೃತಿಯ ಟೀ ಶರ್ಟ ಬಿಡುಗಡೆ, ಮತದಾನ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ನಂತರ ಜಿಲ್ಲಾ ಸ್ವೀಪ್ ಸಮಿತಿ ಮೂಲಕ ಮತದಾನ ಜಾಗೃತಿಯ ಸ್ತಬ್ಧ ಚಿತ್ರ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶ ಶಿರಹಟ್ಟಿಮಠ, ಜಿ.ಪಂ.ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸಿ.ಬಿ.ಕುಂಬಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್, ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಅಧಿಕಾರಿ ರಾಜಶೇಖರ ಧೈವಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.