ಮತದಾನ ಜಾಗೃತಿ ಕಾರ್ಯಕ್ರಮ

ಲಕ್ಷ್ಮೇಶ್ವರ,ಏ18: ಪ್ರತಿಯೊಬ್ಬ ಮತದಾರರೂ ತಮ್ಮ ಹಕ್ಕು ಚಲಾಯಿಸುವುದಲ್ಲದೆ. ತಮ್ಮ ನೆರೆಹೊರೆಯವರಿಗೂ ಮತ ಚಲಾಯಿಸುವಂತೆ ನೋಡಿಕೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಎನ್. ಮಲ್ಲೂರ ಹೇಳಿದರು.
ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಖಾತ್ರಿ ಸಮುದಾಯ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಎಲ್ಲ ಅರ್ಹ ಮತದಾರರು ಒತ್ತಡಗಳನ್ನು ಬದಿಗೊತ್ತಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ತಾಪಂ ಐಇಸಿ ಸಂಯೋಜಕ ವೀರೇಶ ಬಸನಗೌಡ್ರ ಮಾತನಾಡಿ, ಮೇ 7ರಂದು ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯಲಿದೆ. ಆದಿನ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ಅವಕಾಶ ಇರಲಿದೆ. ಆದರೂ ಎಲ್ಲ ಗ್ರಾಮಸ್ಥರು ಮತ್ತು ನರೇಗಾ ಕೂಲಿ ಕಾರ್ಮಿಕರು ಬೆಳಗ್ಗೆ ಬೇಗನೆ ಮತದಾನ ಮಾಡಬೇಕು. ಮತದಾನದ ದಿನ ಯಾವುದೇ ಅನ್ಯ ಕಾರ್ಯಕ್ರಮವಿದ್ದರು, ಮತದಾನಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ತಾಂತ್ರಿಕ ಸಂಯೋಜಕ ಅರುಣಕುಮಾರ ತಂಬ್ರಳ್ಳಿ, ತಾಂತ್ರಿಕ ಸಹಾಯಕ ಲಿಂಗರಾಜ ಅರಷಿಣದ, ಡಿಇಒ ನಿಂಗರಾಜ ಬಾಗವಾಡ, ಜಿಕೆಎಂ, ಕಾಯಕ ಮಿತ್ರರು, ಕೂಲಿಕಾರ್ಮಿಕರು ಪಾಲ್ಗೊಂಡಿದ್ದರು.