ಮತದಾನ ಜಾಗೃತಿ ಕಾರ್ಯಕ್ರಮ

ಲಕ್ಷ್ಮೇಶ್ವರ,ಏ6: ಎಲ್ಲರನ್ನು ಒಳಗೊಳ್ಳುವ ರಾಷ್ಟ್ರ ನಿರ್ಮಾಣ ಮಾಡುವುದು ಸಂವಿಧಾನದ ಆಶಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ವಯಸ್ಕರಿಗೂ ಸಮಾನ ಮತದಾನ ಹಕ್ಕು ಕಲ್ಪಿಸಲಾಗಿದೆ. ಎಲ್ಲರೂ ತಪ್ಪದೆ ಮತದಾನ ಮಾಡಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರ ಎಂ.ಎನ್. ಮಲ್ಲೂರ ಹೇಳಿದರು.
ಲಕ್ಷ್ಮೇಶ್ವರ ತಾಲೂಕಿನ ಮಾಢಳ್ಳಿ ಗ್ರಾಮ ಪಂಚಾಯತಿಯ ಮಾಢಳ್ಳಿ ಮತ್ತು ಯತ್ನಳ್ಳಿ ಗ್ರಾಮದಲ್ಲಿಯ ಉದ್ಯೋಗ ಖಾತ್ರಿ ಯೋಜನೆಯ ವಲಸೆ ಯಾಕ್ರೀ, ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನದಡಿ ಸಮುದಾಯ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಪ್ರತಿಯೊಬ್ಬ ನಾಗರಿಕ ತನ್ನ ಜವಾಬ್ದಾರಿ ಎಂದು ಅರಿತು ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದರು. ಮೇ 7ರಂದು ಲೋಕಸಭೆ ಚುನಾವಣೆಗೆ ಮತದಾನ ಜರುಗಲಿದೆ. ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ತಿಳಿಸಿದರು.
ಗ್ರಾಮೀಣ ಜನರ ವಲಸೆ ತಪ್ಪಿಸಲು ಬೇಸಿಗೆ ಅವಧಿಯಲ್ಲಿ ಹೆಚ್ಚು ಕೆಲಸ ಒದಗಿಸುವ ಉದ್ದೇಶದಿಂದ ನರೇಗಾ ಯೋಜನೆಯಡಿ ಬದು ನಿರ್ಮಾಣ ಸೇರಿ ಇತರೆ ಸಮುದಾಯ ಕಾಮಗಾರಿ ಆರಂಭಿಸಲಾಗಿದೆ. ಮಹಿಳೆಯರು ಸೇರಿ ಎಲ್ಲ ಅರ್ಹರು ಯೋಜನೆಯಡಿ ಕೆಲಸಕ್ಕೆ ಬರಬೇಕು. ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೂಲಿ ನೀಡಲಾಗುತ್ತದೆ ಎಂದರು.
ಕಡ್ಡಾಯ ಮತದಾನ ಮಾಡುವಂತೆ ಮತದಾರರ ಜಾಗೃತಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಈ ಸಂದರ್ಬದಲ್ಲಿ ಗ್ರಾಪಂ ಕಾರ್ಯದರ್ಶಿ ಎನ್.ಪಿ. ಗಾವಡಿ, ಡಿಇಒ ಪ್ರಕಾಶ ಅಂಗಡಿ, ಗ್ರಾಮ ಪಂಚಾಯತ ಸಿಬ್ಬಂದಿ, ಕಾಯಕ ಬಂಧುಗಳು, ಕೂಲಿ ಕಾರ್ಮಿಕರು ಹಾಜರಿದ್ದರು.