ಮತದಾನ ಜಾಗೃತಿಯನ್ನು ಪರಿಣಾಮಕಾರಿಯಾಗಿಸಲು ಏ. 21ರಂದು ಎಲ್ಲಾ ಮತಗಟ್ಟೆಗಳಲ್ಲಿ ವಾಕಥಾನ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.07:- ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ಇದೇ ತಿಂಗಳ 21ರಂದು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ವಾಕಥಾನ್ ಏರ್ಪಡಿಸುವಂತೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಲೋಕಸಭಾ ಸಾರ್ವತ್ರಿಕ ಚುನಾವಣೆಯ ಸಂಬಂಧ ಸ್ವೀಪ್ ಕಾರ್ಯಚಟುವಟಿಕೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯ ಅಂಗವಾಗಿ ಇದೇ ತಿಂಗಳ 26ರಂದು ಚಾಮರಾಜನಗರ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಮತದಾನ ನಡೆಯಲಿದ್ದು, ಮತದಾನದ ಮಹತ್ವ ಕುರಿತು ನಾಗರಿಕರಿಗೆ ಪರಿಣಾಮಕಾರಿ ಅರಿವು ಮೂಡಿಸಬೇಕಾಗಿದೆ. ಭಾರತ ಚುನಾವಣಾ ಆಯೋಗವು ಅಂದು ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಲು ಸೂಚಿಸಿರುವ ನಿಟ್ಟಿನಲ್ಲಿ ಏಪ್ರಿಲ್ 21ರಂದು ‘ನಮ್ಮ ನಡೆ ಮತಗಟ್ಟೆಯ ಕಡೆಗೆ’ ವಾಕಥಾನ್ ಕಾರ್ಯಕ್ರಮವನ್ನು ಎಲ್ಲಾ ಮತಗಟ್ಟೆಗಳಲ್ಲಿ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಆಚರಿಸಲು ಉದ್ದೇಶಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳು ಈ ಸಂಬಂಧ ಆಯಾ ವ್ಯಾಪ್ತಿಯ ತಹಶೀಲ್ದಾರರು, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶಾಲಾ ಶಿಕ್ಷಕರೊಂದಿಗೆ ಸಮನ್ವಯ ಸಾಧಿಸಿ ಮತಗಟ್ಟೆ ಇರುವ ಗ್ರಾಮಗಳ ನಿಗದಿತ ಪರಿಮಿತಿಯಲ್ಲಿ ಸಾರ್ವಜನಿಕರನ್ನೊಳಗೊಂಡು ವಾಕಥಾನ್ ಏರ್ಪಡಿಸಿ ಸ್ಥಾಪಿತವಾಗಿರುವ ಮತಗಟ್ಟೆಯಲ್ಲಿ ಚುನಾವಣಾ ಆಯೋಗ ನೀಡಿರುವ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನಡೆಸಬೇಕು. ಪ್ರತಿ ಮತಗಟ್ಟೆಗಳಲ್ಲಿ ಕನಿಷ್ಠ ಮೂಲಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ನೆರಳಿನ ವ್ಯವಸ್ಥೆ ಅಚ್ಚುಕಟ್ಟಾಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
‘ನಮ್ಮ ನಡೆ ಮತಗಟ್ಟೆಯ ಕಡೆಗೆ’ ವಾಕಥಾನ್ ಕಾರ್ಯಕ್ರಮವನ್ನು ಪ್ರಾಥಮಿಕವಾಗಿ ಮತಗಟ್ಟೆ ಹಂತದಲ್ಲಿ ಮತಗಟ್ಟೆಮಟ್ಟದ ಅಧಿಕಾರಿಗಳು, ಗ್ರಾ.ಪಂ. ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ತಾಲೂಕುಮಟ್ಟದಲ್ಲಿ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ನೇತೃತ್ವದಲ್ಲಿ ಆಯೋಜಿಸಬೇಕು. ವಾಕಥಾನ್ ಜೊತೆಗೆ ಕಾಲ್ನಡಿಗೆ ಜಾಥಾ, ಮತದಾನ ಜಾಗೃತಿ ಕುರಿತ ಭಿತ್ತಿಪತ್ರಗಳ ವಿತರಣೆ, ಸೈಕಲ್ ಜಾಥಾ, ಬೀದಿನಾಟಕ, ಜಾನಪದ ಕಲೆಗಳ ಮೂಲಕ ಮತದಾನದ ಅರಿವು ಕಾರ್ಯಕ್ರಮಗಳ ಅವಶ್ಯವಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳುನ್ನು ಗುರುತಿಸಲಾಗಿದ್ದು, ಆಯಾ ಮತಗಟ್ಟೆಮಟ್ಟದ ಅಧಿಕಾರಿಗಳು ಪ್ರತಿ ಮನೆಮನೆಗಳಿಗೆ ಖುದ್ದು ಭೇಟಿ ನೀಡಿ ಮತದಾರರ ಚೀಟಿಯನ್ನು ವಿತರಿಸುವ ಕಾರ್ಯವನ್ನು ಚುರುಕುಗೊಳಿಸಬೇಕು. ಕಡ್ಡಾಯವಾಗಿ ಹಾಗೂ ತಪ್ಪದೆ ಮತದಾನ ಮಾಡುವಂತೆ ಜನಜಾಗೃತಿ ಮೂಡಿಸಬೇಕು. ಈ ಸಂಬಂಧ ಗುಂಡ್ಲುಪೇಟೆ, ಕೊಳ್ಳೆಗಾಲ ಹಾಗೂ ಹನೂರು ಕ್ಷೇತ್ರಗಳ ಮತಗಟ್ಟೆ ಅಧಿಕಾರಿಗಳು ಸಭೆ ನಡೆಸಿ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.
ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಸಿ-ವಿಜಲ್ ಆಪ್ ಅನ್ನು ಎಲ್ಲಾ ಅಧಿಕಾರಿ, ನೌಕರರು ಡೌನ್ ಲೋಡ್ ಮಾಡಿಕೊಳ್ಳಬೇಕು. ಸಿ-ವಿಜಲ್‍ನಲ್ಲಿ ಹೆಚ್ಚಿನ ದೂರುಗಳು ದಾಖಲಾಗಲು ಆಪ್ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಆಪ್‍ನಲ್ಲಿ ನಕಾರಾತ್ಮಕ ದೂರುಗಳಷ್ಟೆ ಅಲ್ಲ. ಸಕಾರಾತ್ಮಕ ಅಂಶಗಳನ್ನು ಅಪ್‍ಲೋಡ್ ಮಾಡಬಹುದಾಗಿದೆ. ಅಲ್ಲದೆ ಜಿಲ್ಲಾ ಸ್ವೀಪ್ ಸಮಿತಿ ವಿಶಿಷ್ಟವಾಗಿ ಮುದ್ರಿಸಿರುವ ಮತದಾನದ ಮಮತೆಯ ಕರೆಯೋಲೆ ಆಹ್ವಾನ ಪತ್ರಗಳನ್ನು ಪ್ರತಿ ಮನೆಮನೆಗೆ ವಿತರಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಆನಂದ್ ಪ್ರಕಾಶ್ ಮೀನಾ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪಿ. ಲಕ್ಷ್ಮೀ ಅವರು ಈ ಬಾರಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಎಲ್ಲಾ ಮತಗಟ್ಟೆಗಳಲ್ಲಿ ಚಿತ್ರಕಲೆ, ರಂಗೋಲಿ ಬಿಡಿಸಬೇಕು. ಮಹಿಳೆಯರನ್ನು ಸೆಳೆಯಲು ಸಖಿ ಮತಗಟ್ಟೆ, ಅರಣ್ಯದ ಅರಿವು ಮೂಡಿಸುವ ಹಸಿರು ಮತಗಟ್ಟೆ, ರೈತರಿಗಾಗಿ ಅನ್ನದಾತರ ಮತಗಟ್ಟೆ, ವಿಶೇಷಚೇತನರಿಗಾಗಿ ಪಿ.ಡಬ್ಲೂ.ಡಿ ಮತಗಟ್ಟೆ, ರಾಮಸಮುದ್ರದಲ್ಲಿ ಜಾನಪದ ಕಲೆಗಳ ಮತಗಟ್ಟೆ ಮತ್ತು ಬುಡಕಟ್ಟು ಜನರು ಹೆಚ್ಚಾಗಿ ವಾಸಿಸುವ ಸ್ಥಳಗಳಲ್ಲಿ ಬುಡಕಟ್ಟು ಜನರ ಆಹಾರ ಪದ್ದತಿ, ಉಡುಗೆ ತೊಡುಗೆ, ಅವರು ಬಳಸುವ ಪರಿಕರಗಳನ್ನಿಟ್ಟು ವಿಶೇಷ ಮತಗಟ್ಟೆಗಳ ಅಂದವನ್ನು ಹೆಚ್ಚಿಸಿ ಮತದಾರರನ್ನು ಸೆಳೆಯಲು ಕಾರ್ಯಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ಆಯೋಜಿಸುವಂತೆ ತಿಳಿಸಿದರು.
ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು, ಮತಗಟ್ಟೆಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.