ಮತದಾನ ಜಾಗೃತಿಗೆ ಸ್ವೀಪ್ ಸಮಿತಿಯಿಂದ ಸೈಕಲ್ ಜಾಥಾ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.6 :- ಕಡ್ಡಾಯ ಮತದಾನ ಜಾಗೃತಿಗಾಗಿ ತಾಲೂಕು ಸ್ವೀಪ್ ಸಮಿತಿ, ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಸಹಯೋಗದಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿ ಬಳಿ ಸೈಕಲ್ ಜಾಥಾಕ್ಕೆ ತಹಸೀಲ್ದಾರ್ ಟಿ.ಜಗದೀಶ್, ತಾಪಂ ಇಒ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವೈ.ರವಿಕುಮಾರ್ ಬುಧವಾರ ಚಾಲನೆ ನೀಡಿದರು.
ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವೈ.ರವಿಕುಮಾರ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ 101 ಮತಗಟ್ಟೆಗಳಲ್ಲಿ ಕಡಿಮೆ ಮತದಾನ ಆಗಿತ್ತು. ಹೀಗಾಗಿ, ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಆಗಬೇಕೆಂಬ ಹಿನ್ನೆಲೆ  ವಿದ್ಯಾರ್ಥಿಗಳಿಂದ ಪಾಲಕರಿಗೆ ಪತ್ರ ಅಭಿಯಾನ, ಅಂಗವಿಕಲರಿಂದ ತ್ರಿಚಕ್ರ ವಾಹನ ಸೇರಿ ನಾನಾ ಕಾರ್ಯಕ್ರಮಗಳ ಮೂಲಕ ಕಡ್ಡಾಯ ಮತದಾನಕ್ಕೆ ಜಾಗೃತಿ ಅಭಿಯಾನ ನಡೆಸಲಾಗಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸಲು ಮುಂದಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಟಿ.ಜಗದೀಶ್, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಾಲ್ತೂರು ಶಿವರಾಜ, ಜಿಪಂ ಎಂಜಿನಿಯರಿಂಗ್ ಎಇಇ ಮಲ್ಲಿಕಾರ್ಜುನ, ಬಿಸಿಎಂ ತಾಲೂಕು ಕಲ್ಯಾಣಾಧಿಕಾರಿ ಪಂಪಾಪತಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಜಗದೀಶ್ ದಿಗಡೂರು, ಬಿಸಿಎಂ ವಸತಿ ನಿಲಯ ಮೇಲ್ವಿಚಾರಕ ಅಂಜಿನಪ್ಪ, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ಸಿದ್ಧಾರಾಧ್ಯ, ತಾಪಂ ಅಧಿಕಾರಿ ವೆಂಕಟೇಶ್ ಸೇರಿ ಚುನಾವಣಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ತಹಸೀಲ್ದಾರ್ ಕಚೇರಿಯಿಂದ ಪ್ರಮುಖ ರಸ್ತೆಯ ಮೂಲಕ ಡಾ.ಬಿ.ಆರ್.ಅಂಬೇಡ್ಕರ್, ರಾಜವೀರ ಮದಕರಿ ನಾಯಕ ವೃತ್ತದಲ್ಲಿ ಸೈಕಲ್ ಜಾಥಾ ನಡೆಯಿತು