ಮತದಾನ ಜಾಗೃತಿಗೆ ವೈದ್ಯ ಸಾಥ್

ಬೀದರ್: ಮೇ.7:ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತದಾನ ಹೆಚ್ಚಳಕ್ಕೆ ಜಿಲ್ಲಾ ಆಡಳಿತ ನಡೆಸುತ್ತಿರುವ ಅಭಿಯಾನಕ್ಕೆ ಖ್ಯಾತ ಚರ್ಮರೋಗ ತಜ್ಞ ಡಾ. ಅಶೋಕಕುಮಾರ ನಾಗೂರೆ ಸಾಥ್ ನೀಡುತ್ತಿದ್ದಾರೆ.

ನಗರದ ಪನ್ನಾಲಾಲ್ ಹೀರಾಲಾಲ್ ಕಾಲೇಜು ಸಮೀಪ ಇರುವ ತಮ್ಮ ಕ್ಲಿನಿಕ್‍ಗೆ ನಿತ್ಯ ಬರುವ ರೋಗಿಗಳಲ್ಲಿ ಅವರು ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ.

ಕ್ಲಿನಿಕ್ ಒಳಗೆ ‘ಮತದಾನ ನಮ್ಮ ಹಕ್ಕು’, ‘ದೇಶದ ಉಜ್ವಲ ಭವಿಷ್ಯಕ್ಕಾಗಿ ತಪ್ಪದೆ ಮತ ಚಲಾಯಿಸಿ’, ‘ಯೋಗ್ಯ ಪ್ರತಿನಿಧಿ ಆಯ್ಕೆ ಮಾಡಿ’, ‘ಹಣಕ್ಕಾಗಿ ಮತ ಮಾರಿಕೊಳ್ಳದಿರಿ’ ಎಂಬಿತ್ಯಾದಿ ಫಲಕಗಳನ್ನು ಅಳವಡಿಸಿದ್ದಾರೆ.

ಕ್ಲಿನಿಕ್ ಒಳಗೆ ಬರುತ್ತಲೇ ಸಿಬ್ಬಂದಿ ರೋಗಿಗಳಿಗೆ ಮತದಾನ ಜಾಗೃತಿಯ ಕರಪತ್ರ ವಿತರಿಸುತ್ತಿದ್ದಾರೆ. ಬಳಿಕ ತಪಾಸಣೆ ವೇಳೆ ನಾಗೂರೆ ಅವರು, ಮತದಾನ ಮಹತ್ವ ಕುರಿತು ತಿಳಿವಳಿಕೆ ಮೂಡಿಸುತ್ತಿದ್ದಾರೆ.

ಮತದಾನ ಸಂವಿಧಾನ ನಮಗೆ ನೀಡಿರುವ ಹಕ್ಕು. ಮತದಾನದಿಂದಲೇ ದೇಶದಲ್ಲಿ ಸುಭದ್ರ ಸರ್ಕಾರ ರಚಿಸಲು ಹಾಗೂ ಬದಲಾವಣೆ ತರಲು ಸಾಧ್ಯವಿದೆ. ಹೀಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ಹೆಚ್ಚಳಕ್ಕೆ ಜಿಲ್ಲಾ ಆಡಳಿತ ನಡೆಸುತ್ತಿರುವ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.