ಮತದಾನ ಜಾಗೃತಿಗೆ ನಾನಾ ಕಾರ್ಯಕ್ರಮ

ದೇವದುರ್ಗ,ಮೇ.೦೮- ವಿಧಾನಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ನೇತೃತ್ವದಲ್ಲಿ ವಿವಿಧ ಇಲಾಖೆಗಳು ವಿಭಿನ್ನ ಕಾರ್ಯಕ್ರಮ ಆಯೋಜಿಸಿ ಮತದಾನ ಜಾಗೃತಿ ಅಭಿಯಾನ ಭಾನುವಾರ ಕೈಗೊಂಡರು.
ಪಟ್ಟಣದ ತಾಪಂ ಕಚೇರಿಯಲ್ಲಿ ಜಾಗೃತಿ ಜಾಥಾ ಮಾಡಲಾಯಿತು. ನಂತರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅಭಿಯಾನ ನಡೆಸಿ ಜನರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಡ್ರಮ್‌ಸೆಟ್ ಮೂಲಕ ಕೆಲತಂಡಗಳು ಜಾಥಾ ನಡೆಸಿದರೆ, ಇನ್ನು ಕೆಲವರು ಘೋಷಣೆ ಕೂಗಿ ವಿವಿಧ ಬಡವಾಣೆಯಲ್ಲಿ ಪಾದಯಾತ್ರೆ ನಡೆಸಿದರು. ಅಧಿಕಾರಿಗಳು ಬೈಕ್‌ರ್‍ಯಾಲಿ ನಡೆಸಿ ಗಮನ ಸೆಳೆದರು.
ಚುನಾವಣಾಧಿಕಾರಿ ಎಂ.ಎನ್.ಚೇತನ್‌ಕುಮಾರ ಡ್ರಮ್ ಬಾರಿಸಿ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಶೇ.೧೦೦ರಷ್ಟು ಮತದಾನ ಮಾಡಲು ಸ್ವೀಪ್‌ಸಮಿತಿ ಸಿದ್ಧತೆ ನಡೆಸಿದೆ. ಇದಕ್ಕಾಗಿ ಪ್ರತಿಯೊಂದು ಕಡೆ ಮತದಾನ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು. ಪ್ರತಿಯೊಬ್ಬರೂ ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದರು.
ತಹಸೀಲ್ದಾರ್ ವೈ.ಕೆ.ಬಿದರಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ, ಬಿಇಒ ಸುಖದೇವ್, ಸಿಡಿಪಿಒ ವೆಂಕಟಪ್ಪ, ಮೇಲ್ವಿಚಾರಕಿ ಗಂಗಮ್ಮ, ವಾರ್ಡನ್, ಭೀಮಣ್ಣ ಡೆಂಗೇರ್, ವಿಜಯಲಕ್ಷ್ಮಿ ಇತರರಿದ್ದರು.