ಗದಗ,ಇ 16: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರಿಂದ ಮತದಾರರ ಜಾಗೃತಿಗಾಗಿ ವಿಶೇಷ ಸಾಂಪ್ರದಾಯಿಕ ಉಡುಗೆಯಲ್ಲಿ ಬೃಹತ್ ಜಾಥಾ ಕಾರ್ಯಕ್ರಮ ಆಯೋಜಿಸಿದೆ. ಇದರ ಉದ್ದೇಶ ಇಷ್ಟೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಮೇ 10 ರಂದು ಜರುಗುವ ಮತದಾನದಂದು ತಪ್ಪದೇ ಎಲ್ಲ ಅರ್ಹ ಮತದಾರರು ಮತ ಚಲಾಯಿಸಬೆಕು ಎನ್ನುವುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ ಹೇಳಿದರು.
ನಗರದ ಕಳಸಾಪುರ ರಸ್ತೆಯಲ್ಲಿರುವ ಒಳಾಂಗಣ ಕ್ರೀಡಾಂಗಣದಿಂದ ಬೃಹತ್ ಜಾಥಾವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರಿಂದ ಹಮ್ಮಿಕೊಳ್ಳಲಾಗಿತ್ತು. ಮತದಾರರ ಜಾಗೃತಿ ಮೂಡಿಸುವ ಈ ಜಾಥಾ ಕಾರ್ಯಕ್ರಮಕ್ಕೆ ಮೈ ಭಾರತ್ ಹೂ ಗೀತೆಯೊಂದಿಗೆ ಆರಂಭವಾದ ಸಾಂಪ್ರದಾಯಿಕ ನಡಿಗೆಯು ನಗರದ ಬಸವೇಶ್ವರ ಶಾಲೆ,ಮುಳಗುಂದ ನಾಕಾ, ಕೋರ್ಟ ಸರ್ಕಲ್ ಮೂಲಕ ಸಂಚರಿಸಿದ ಬೃಹತ್ ಸಾಂಪ್ರದಾಯಿಕ ನಡಿಗೆ ಜಾಥಾವು ಜಿಲ್ಲಾಡಳಿತ ಭವನ ಬಂದು ತಲುಪಿತು.
ನಂತರ ಮಾತನಾಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಶೀಲಾ ಬಿ ಅವರು ಮೇ 10 ರಂದು ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮತದಾನ ಜರುಗಲಿದೆ. ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದ್ದು ಅರ್ಹ ಮತದಾರರೆಲ್ಲರೂ ಕಡ್ಡಾಯವಾಗಿ ತಮ್ಮ ಮತಗಟ್ಟೆಗೆ ತೆರಳಿ ಮತ ಹಾಕಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನಾರಾಯಣಿ ಮಾತನಾಡಿ ಜಿಲ್ಲಾ , ತಾಲೂಕು, ಗ್ರಾಮ ಮಟ್ಟದಲ್ಲಿ ಸ್ವೀಪ್ ಸಮಿತಿ ವತಿಯಿಂದ ಕಳೆದ 2-3 ತಿಂಗಳಿಂದ ನಿರಂತರವಾಗಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಿ ಮತದಾನ ನಮ್ಮ ಹಕ್ಕು ಅದನ್ನು ತಪ್ಪದೇ ಚಲಾಯಿಸೋಣ. ಮತದಾನ ದಿನವನ್ನು ಅತ್ಯಂತ ಸಂಭ್ರಮ, ಸಡಗರದ ಹಬ್ಬದಂತೆ ಆಚರಿಸೋಣ ಎಂದರು.
ಹಾತಲಗೇರಿ ಗ್ರಾಮ ಪಂಚಾಯತ್ ವಾಟರ್ಮನ್ ಸತ್ಯಪ್ಪ ಬಿದರಣ್ಣನವರ ರಾವಣ ವೇಷದಲ್ಲಿ ಕಂಡು ಗಮನ ಸೆಳದರು. ನಾನು ಲಂಕಾಧಿಪತಿ ರಾವಣ, ನಾನು ಕಡ್ಡಾಯವಾಗಿ ಮತದಾನ ಮಾಡುವೆ. ನೀವು ಮತದಾನ ಮಾಡಿ ಎಂಬ ಘೋಷ ವಾಕ್ಯ ವನ್ನು ಅಂಟಿಸಿಕೊಂಡು ಮೆರೆದ ಸಾರ್ವಜನಿಕರಿಗೆ ಆಕರ್ಷಣೀಯವಾದರು.ಹೊಳೆ ಮಣ್ಣೂರ ದುರ್ಗಾ ದೇವಿ ಕಲಾ ತಂಡದಿಂದ ಡೊಳ್ಳು ಕುಣಿತ , ಎನ್.ಸಿ.ಸಿ. 38 ಕರ್ನಾಟಕ ಬಟಾಲಿಯನ್ , ಜಿ.ಪಂ., ತಾ.ಪಂ, ಹಾಗೂ ಗ್ರಾ.ಪಂ. ನೌಕರರು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಸವರಾಜ ಅಡವಿಮಠ, ಮುಖ್ಯ ಯೋಜನಾಧಿಕಾರಿ ವಾಗೀಶ , ಮುಖ್ಯ ಲೆಕ್ಕಾಧಿಕಾರಿ ಜೆ.ಸಿ.ಪ್ರಶಾಂತ, ಶಿರಹಟ್ಟಿ ಚುನಾವಣಾಧಿಕಾರಿ ಕಿಶನ್ ಕಲಾಲ, ಲೀಡ್ ಬ್ಯಾಂಕ್ ಮ್ಯಾನೇಜರ್ ಜಬ್ಬಾರ್ , ಕ್ರೀಡಾಧಿಕಾರಿ ವಿಠಲ ಜಾಬಗೌಡ್ರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಬ್ಬಂದಿಗಳು ಹಾಜರಿದ್ದರು.