
ಗದಗ, ಏ1: ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಗೆ ಈಗಾಗಲೇ ವೇಳಾಪಟ್ಟಿಯನ್ನು ಚುನಾವಣಾ ಆಯೋಗವು ಪ್ರಕಟಿಸಿದೆ. ಮೇ 10 ರಂದು ಜರುಗಲಿರುವ ಮತದಾನ ಪ್ರಕ್ರಿಯೆಯಲ್ಲಿ ಜಿಲ್ಲೆಯು 100ಪ್ರತಿಶತ ಮತದಾನವಾಗುವಂತೆ ಜಿಲ್ಲಾದ್ಯಂತ ಮತದಾರರನ್ನು ಜಾಗೃತಿಗೊಳಿಸಲು ವಿಶಿಷ್ಟ, ವಿಭಿನ್ನ, ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಸುಶೀಲಾ ಬಿ. ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಸ್ವೀಪ ಸಮಿತಿಯಿಂದ ಮತದಾರರ ಜಾಗೃತಿಗಾಗಿ ವಿವಿಧ ಇಲಾಖೆಗಳು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿವೆ. ಮತದಾನದ ದಿನದಂದು ಮತದಾರ ಸ್ವ ಪ್ರೇರಿತನಾಗಿ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡುವಂತೆ ಪ್ರೇರಿಪಿಸುವಂತಹ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.
ವಿವಿಧ ಇಲಾಖೆಗಳ ಎಲ್ಲ ಸ್ಥರದ ಅಧಿಕಾರಿ ಸಿಬ್ಬಂದಿಗಳು ಒಂದೇ ವೇದಿಕೆಯಲ್ಲಿ ಬೃಹತ ಕಾರ್ಯಕ್ರಮ ಆಯೋಜಿಸಿ ಪರಿಣಾಮಕಾರಿಯಾಗಿಸಬೇಕು. ಮತದಾರನು ನೈತಿಕ ಮತದಾನ ಬಗ್ಗೆ ಹಾಗೂ ವಲಸೆ ಮತದಾರರನ್ನು ಕರೆತರುವ ಬಗ್ಗೆ ಅಲ್ಲದೇ ನಿರಾಸಕ್ತಿದಾಯಕ ಮತದಾರರನ್ನು ಮತಕೇಂದ್ರಕ್ಕೆ ಕರೆತರಲು ಕಾರ್ಯಕ್ರಮಗಳು ಪೂರಕವಾಗಿರುವಂತೆ ಹಮ್ಮಿಕೊಳ್ಳಬೇಕು. ಈ ಹಂತವಾಗಿ ಏಪ್ರೀಲ್ 6 ರಂದು ಸಂಜೆ 6 ಗಂಟೆಗೆ ಬೆಟಗೇರಿಯಲ್ಲಿ ಎಲ್ಲ ಇಲಾಖೆಯ ನೌಕರರು ಬೃಹತ ಮಟ್ಟದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಹೇಳಿದರು.
ನಂತರದಲ್ಲಿ ಏಪ್ರೀಲ್ 8 ರಂದು ಬಸ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರ ಮನಸೆಳೆಯುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಒಟ್ಟಾರೆ ಪ್ರತಿ ಮತವು ಪ್ರಜಾಪ್ರಭುತ್ವದ ಶಕ್ತಿ ಎಂಬುದನ್ನು ಮತದಾರನಿಗೆ ಅರಿವು ಮೂಡವಂತಾಗಬೇಕೆಂದರು. ವಿವಿಧ ಇಲಾಖೆಗಳ ಸ್ವೀಪ್ ಸಮಿತಿಯ ಸದಸ್ಯರುಗಳು ತಮ್ಮದೇ ಆದ ಸಲಹೆ ಸೂಚನೆಗಳನ್ನು ವ್ಯಕ್ತಿ ಪಡಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಸಹಮತ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕರಿ ವಾಗೀಶ ಪಂಡಿತಾರಾಧ್ಯ, ನಗರಾಭಿವೃದ್ಧಿ ಕೊಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಡಿ.ಡಿ.ಪಿಯು ಕರಿಸಿದ್ದಪ್ಪ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.