ಮತದಾನ ಜಾಗೃತಿಗಾಗಿ ಮ್ಯಾರಥಾನ್


ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.23; ಜಿಲ್ಲೆಯ ಎಲ್ಲಾ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮ್ಯಾರಥಾನ್, ವಾಕಾಥಾನ್, ಜಾಥಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.ನಗರದ ಒನಕೆ ಓಬವ್ವ ವೃತ್ತದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಮ್ಯಾರಥಾನ್, ವಾಕಥಾನ್‍ಗೆ ಚಾಲನೆ ನೀಡಿ ಅವರು ಮಾತನಾಡಿದರು.ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾರರಲ್ಲಿ ಅರಿವು ಮೂಡಿಸುವ ಅಭಿಯಾನ ಕಾರ್ಯಕ್ರಮ ಆರಂಭಿಸಲಾಗಿದ್ದು, ಜಿಲ್ಲೆಯ ಎಲ್ಲಾ ಅರ್ಹ ಮತದಾರರು ಕಡ್ಡಾಯವಾಗಿ 2024ರ ಏಪ್ರಿಲ್-26ರಂದು ಮತಗಟ್ಟೆ ಕೇಂದ್ರಕ್ಕೆ ತೆರಳಿ ತಮ್ಮ ಹಕ್ಕುನ್ನು ಚಲಾಯಿಸಬೇಕು. ಮತದಾನ ನಮ್ಮೆಲ್ಲರ ಹಕ್ಕು. ಕಳೆದ ಚುನಾವಣೆಗಿಂತ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಸದೃಢಗೊಳಿಸಬೇಕು ಎಂದರು.ಕಳೆದ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲೆಲ್ಲಿ ಕಡಿಮೆ ಮತದಾನವಾಗಿದೆ ಎಂಬುದರ ಬಗ್ಗೆ ಅಂಕಿ-ಅಂಶ ಮಾಹಿತಿ ಪಡೆದಿದ್ದು, ಈ ಬಾರಿ ಹೆಚ್ಚಿನ ಮತದಾನವಾಗುವ ರೀತಿಯಲ್ಲಿ ವಿಭಿನ್ನ ಹಾಗೂ ವಿಶೇಷವಾಗಿ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತದೆ ಎಂದರು.ಮತದಾನದ ಜಾಗೃತಿ ಕಾರ್ಯಕ್ರಮ ಕಾಲ್ನಡಿಗೆ ಮೂಲಕ ಚಿತ್ರದುರ್ಗ ನಗರದ ಹೃದಯ ಭಾಗ ಒನಕೆ ಓಬವ್ವ ವೃತ್ತದಿಂದ ಪ್ರಾರಂಭವಾಗಿ, ನಗರದ ಸರಸ್ವತಿ ಕಾನೂನು ಕಾಲೇಜಿನ ರಸ್ತೆ, ಸಿ.ಕೆ.ಪುರ ಕೆಳಗೋಟೆ ಮಾರ್ಗವಾಗಿ ಮುನ್ಸಿಪಾಲ್ ಕಾಲೋನಿ, ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಿಂದ, ತಿಪ್ಪಜ್ಜಿ ಸರ್ಕಲ್ ಮೂಲಕ ಒನಕೆ ಒಬ್ಬವ್ವ ವೃತ್ತದ ಬಳಿ ಕೊನೆಕೊಂಡಿತು. ದಾರಿ ಉದ್ದಕ್ಕೂ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಿಂಗಲ್ಸ್ ಮತ್ತು ಘೋಷಣೆಗಳನ್ನು ಕೂಗುತ್ತಾ ಮತ್ತು ಭಿತ್ತಿ ಫಲಕಗಳ ಮೂಲಕ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಯಿತು.ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ನಗರಸಭೆ  ಪೌರಾಯುಕ್ತೆ ಎಂ.ರೇಣುಕಾ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.