
ಚಿತ್ರದುರ್ಗ.ಮೇ.೮; ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇದೇ ಮೇ.10ರಂದು ಮತದಾನ ನಡೆಯಲಿದ್ದು, ಜಿಲ್ಲೆಯ ಎಲ್ಲ ಮತದಾರರು ತಪ್ಪದೇ ತಮ್ಮ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.ಚಿತ್ರದುರ್ಗ ನಗರ ಐತಿಹಾಸಿಕ ಕೋಟೆಯ ಏಕನಾಥೇಶ್ವರ ಪಾದಗುಡಿ ಸಮೀಪ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿಗಾಗಿ ಮ್ಯಾರಥಾನ್ ಓಟಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಕಡಿಮೆ ಪ್ರಮಾಣದ ಮತದಾನ ದಾಖಲಾಗಿರುವ ಪ್ರದೇಶಗಳಲ್ಲಿ ಸ್ವೀಪ್ ಸಮಿತಿ ವತಿಯಿಂದ ಮತದಾನದ ಮಹತ್ವ ಹಾಗೂ ಮತದಾನದ ಅವಶ್ಯಕತೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ವಿವಿಧ ಹಂತಗಳಲ್ಲಿ ಚುನಾವಣಾ ಘೋಷಣೆಯಾದ ದಿನದಿಂದಲೂ ಹಮ್ಮಿಕೊಳ್ಳಲಾಗುತ್ತಿದೆ. ಕಡಿಮೆ ಪ್ರಮಾಣದ ಮತದಾನ ದಾಖಲಾಗಿರುವ ಪ್ರದೇಶಗಳಲ್ಲಿ ಮ್ಯಾರಥಾನ್, ವಾಕಥಾನ್ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಎಲ್ಲ ಮತದಾರರು ಚುನಾವಣೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ಸದೃಢಗೊಳಿಸಬೇಕು ಎಂದು ಕರೆ ನೀಡಿದರು.ಮತದಾನ ಜಾಗೃತಿಗಾಗಿ ಮ್ಯಾರಥಾನ್ ಓಟವು ಐತಿಹಾಸಿಕ ಕೋಟೆಯ ಏಕನಾಥೇಶ್ವರಿ ಪಾದಗುಡಿ ಆರಂಭವಾಗಿ ಕರುವಿನಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ, ಮದಕರಿ ವೃತ್ತ, ಬಿ.ಡಿ.ರಸ್ತೆ, ಎಲ್‍ಐಸಿ ಮುಂಭಾಗ, ಸ್ಟೇಡಿಯಂ ಅಡ್ಡ ರಸ್ತೆ ಮಾರ್ಗವಾಗಿ ಒನಕೆ ಓಬವ್ವ ಕ್ರೀಡಾಂಗಣದವರೆಗೆ ನಡೆಯಿತು.ಇದೇ ಸಂದರ್ಭದಲ್ಲಿ ಮ್ಯಾರಥಾನ್ ಮುಕ್ತಾಯ ಹಂತವಾದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಮ್ಯಾರಥಾನ್ ಓಟದಲ್ಲಿ ವಿಜೇತ ಯುವಕ ಯುವತಿಯರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಎಂ.ಎಸ್.ದಿವಾಕರ, ತಾಲ್ಲೂಕು ಪಂಚಾಯಿತಿ ಇಒ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹೆಚ್.ಹನುಮಂತಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾರ್ಪ್ ಪುಟ್ಬಾಲ್ ಕ್ಲಬ್, ಕ್ಲಾಸಿಕ್ ಅಥ್ಲೇಟಿಕ್ ಕ್ಲಬ್, ಸಮಾಜ ಕಲ್ಯಾಣ ಇಲಾಖೆ, ರೆಡ್‍ಬುಲ್ಸ್ ಕ್ಲಬ್, ಚಾಲೇಂಜರ್ಸ್ ಟೀಂ, ಡ್ರಿಮ್ಸ್ ಸ್ಪೋಟ್ರ್ಸ್ ಫಿಟ್‍ನೆಸ್ ಅಕಾಡೆಮಿ, ದುರ್ಗನ್ಸ್ ಅಥ್ಲೆಟಿಕ್ಸ್ ಕ್ಲಬ್ ಸೇರಿದಂತೆ ಮತ್ತಿತರರು ಇದ್ದರು.