ಮತದಾನ ಜಾಗೃತಿಗಾಗಿ ಡಿಸಿ, ಸಿಇಒ, ಸರ್ಕಾರಿ ನೌಕರರಿಂದ ಬೈಕ್ ರ್ಯಾಲಿ

ಚಾಮರಾಜನಗರ, ಏ.27:- ಮತದಾನ ಜಾಗೃತಿಗಾಗಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಕಾಧಿಕಾರಿ ಎಸ್.ಪೂವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹಾಗೂ ಸರ್ಕಾರಿ ನೌಕರರುಇಂದು ನಗರದಲ್ಲಿ ಬೈಕ್‍ರ್ಯಾಲಿ ನಡೆಸಿ ವಿಶೇಷ ಗಮನ ಸೆಳೆದರು.
ನಗರದ ಪ್ರವಾಸಿಮಂದಿರದಲ್ಲಿ ಆರಂಭವಾದ ಬೈಕ್ ರ್ಯಾಲಿ ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ, ರಾಮಸಮುದ್ರ ಬಡಾವಣೆ, ಕರಿನಂಜನಪುರ ರಸ್ತೆ, ನ್ಯಾಯಾಲಯರಸ್ತೆ, ಬುದ್ದನಗರದರಸ್ತೆ ಮೂಲಕ ಸಾಗಿ ಜಿಲ್ಲಾಡಳಿತ ಭವನದಲ್ಲಿ ಮುಕ್ತಾಯವಾಯಿತು.
ನಗರದ ಪ್ರವಾಸಿಮಂದಿರದಲ್ಲಿ ಜಿಲ್ಲಾಧಿಕಾರಿಡಿ.ಎಸ್. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಕಾಧಿಕಾರಿ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆದ ಎಸ್. ಪೂವಿತಾ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಅತಿ ಅಮೂಲ್ಯ ಮತದಾನದ ಮೂಲಕ ಪ್ರಜಾ ಪ್ರಭುತ್ವವನ್ನು ಭದ್ರಗೊಳಿಸಬೇಕು. ಯಾರೂ ಸಹ ಮತದಾನದಿಂದ ವಂಚಿತರಾಗಬಾರದು ಎಂಬ ಮಹತ್ತರ ಸಂದೇಶ ಸಾರಲು ಇಂದು ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಚಾಮರಾಜನಗರ ಪಟ್ಟಣದಲ್ಲಿ ಕಳೆದ ಬಾರಿಯಚುನಾವಣೆಯಲ್ಲಿ ಕೆಲ ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿದೆ. ಅಂತಹ ಮತಗಟ್ಟೆಗಳನ್ನು ಗಮನಕ್ಕೆ ತೆಗೆದುಕೊಂಡು ಮತದಾನ ಹೆಚ್ಚಳಕ್ಕಾಗಿ ರಾಜ್ಯ ಸರ್ಕಾರಿ ನೌಕರರ ವತಿಯಿಂದ ಅರಿವು ಮೂಡಿಸಲಾಗುತ್ತಿದೆ. ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ ಅವರು ಮಾತನಾಡಿ ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಬೇಕು. ಆಗ ಜನತಂತ್ರ ಯಶಸ್ವಿಯಾಗುತ್ತದೆ. ನಗರದ 33 ಮತಗಟ್ಟೆಗಳಲ್ಲಿ ಈ ಹಿಂದೆಕಡಿಮೆ ಮತದಾನವಾಗಿತ್ತು. ಇಂತಹಮತಗಟ್ಟೆಗಳಲ್ಲಿ ಮತದಾನದ ಪ್ರಮಾಣ ಈ ಬಾರಿ ಹೆಚ್ಚಾಗಬೇಕೆಂಬ ಉದ್ದೇಶದಿಂದ ವಿಶೇಷವಾಗಿ ಸರ್ಕಾರಿ ನೌಕರರ ಮೂಲಕ ಜಾಗೃತಿ ಕಾರ್ಯಕ್ರಮಏರ್ಪಡಿಸಲಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಅವರು ಮಾತನಾಡಿ ಮತದಾನದ ಜಾಗೃತಿಗಾಗಿ ಸರ್ಕಾರಿ ನೌಕರರ ಸಂಘದಿಂದ ಪ್ರಥಮ ಬಾರಿಗೆ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದೆ. ಮತದಾನದ ಮಹತ್ವ ತಿಳಿಸಿಕೊಡುವ ಅರಿವು ಕಾರ್ಯಕ್ರಮಗಳಿಗೆ ಸಂಘದಿಂದ ಸಹಕಾರ ನೀಡಲಾಗುತ್ತದೆ ಎಂದರು.
ತಹಶೀಲ್ದಾರ್ ಐ.ಈ. ಬಸವರಾಜು, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಖಜಾಂಚಿಎಸ್. ಮಹದೇವಯ್ಯ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಸಿ. ಕೆಂಪರಾಜು, ಸರ್ಕಾರಿ ನೌಕರರ ಸಂಘದಜಿಲ್ಲಾ, ತಾಲೂಕು ಪದಾಧಿಕಾರಿಗಳು ಹಾಜರಿದ್ದರು.