ಮತದಾನ ಜಾಗೃತಿಗಾಗಿ ಕ್ಯಾಂಡಲ್ ಲೈಟ್ ನಡಿಗೆ

ಗದಗ,ಮಾ.1: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪ್ರತಿಶತ 100 ರಷ್ಟು ಗುರಿ ಸಾಧಿಸುವ ಉದ್ದೇಶದೊಂದಿಗೆ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಏ.29 ರಂದು ನಗರಸಭೆ ವತಿಯಿಂದ ನಗರದಲ್ಲಿನ ಮತದಾರರನ್ನು ಜಾಗೃತಿಗೊಳಿಸಿ ಮತದಾನ ಪ್ರಕ್ರಿಯೆಯಲ್ಲಿ ತಪ್ಪದೇ ಪಾಲ್ಗೊಳ್ಳುವಂತೆ ಪ್ರೇರೆಪಿಸುವ ಉದ್ದೇಶದೊಂದಿಗೆ ಕ್ಯಾಂಡಲ್ ಲೈಟ ನಡಿಗೆಯನ್ನು ಆಯೋಜಿಸಲಾಗಿತ್ತು. ನಗರದ ಜೋಡ ಮಾರುತಿ ರಸ್ತೆಯಿಂದ ಪ್ರಾರಂಭವಾದ ಕ್ಯಾಂಡೆಲ್ ಲೈಟ್ ನಡಿಗೆಯನ್ನು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಾರುತಿ ಬ್ಯಾಕೋಡ್ ಚಾಲನೆ ನೀಡಿ ಮಾತನಾಡಿದರು. ಮತದಾನ ಎಂಬುದು ಪ್ರತಿಯೊಬ್ಬ ಅರ್ಹ ಮತದಾರನ ಆದ್ಯ ಕರ್ತವ್ಯವಾಗಿದೆ. ಮತದಾನದ ದಿನದಂದು ಪ್ರತಿಯೊಬ್ಬ ಅರ್ಹ ಮತದಾರನ್ನು ತಮ್ಮ ಹಕ್ಕನ್ನು ಚಲಾಯಿಸಲು ಮುಂದಾಗುವಂತೆ ತಿಳಿಸಿದರು. ಯಾವುದೇ ಆಮಿಷುಗಳಿಗೆ ಒಳಗಾಗದೇ ತಮ್ಮ ಹಕ್ಕನ್ನು ಚಲಾಯಿಸಿ ಸಧೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ಅವರು ತಿಳಿಸಿದರು.

ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಜಿ.ಪಂ. ಯೋಜನಾ ನಿರ್ದೇಶಕ ವಾಗೀಶ, ನಗರಸಭೆ ಕಚೇರಿ ವ್ಯವಸ್ಥಾಪಕ ಪರಶುರಾಮ ಶೇರಖಾನೆ, ಚುನಾವಣೆ ವಿಷಯ ನಿರ್ವಾಹಕ ಸಿ.ಬಿ.ಆರಾಧ್ಯಮಠ, ನಗರಸಭೆ ಪರಿಸರ ಅಭಿಯಂತರ ಆನಂದ ಬದಿ ಸೇರಿದಂತೆ ಸಿಬ್ಬಂದಿಗಳು ಕ್ಯಾಂಡೆಲ್ ಲೈಟ ನಡಿಗೆಯಲ್ಲಿ ಭಾಗವಹಿಸಿದ್ದರು.

ಕ್ಯಾಂಡೆಲ್ ಲೈಟ ನಡಿಗೆಯು ನಗರದ ಜೋಡ ಮಾರುತಿ ರಸ್ತೆಯಿಂದ ಪ್ರಾರಂಭವಾಗಿ ಚವಡಿ ಕೂಟ, ಹುಯಿಲಗೋಲ ನಾರಾಯಣರಾವ ವೃತ್ತ ಮಾರ್ಗವಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಗಾಂಧೀ ವೃತ್ತಕ್ಕೆ ಬಂದು ಮುಕ್ತಾಯಗೊಂಡಿತು. ಇದೇ ಸಂದರ್ಭದಲ್ಲಿ ಕೊಣ್ಣೂರಿನ ಜೈ ಕಿಸಾನ ಸಾಂಸ್ಕøತಿಕ ಕಲಾತಂಡವು ಮತದಾರರ ಜಾಗೃತಿ ಕುರಿತು ಬೀದಿ ನಾಟಕವನ್ನು ಪ್ರಸ್ತುತಪಡಿಸಿದರು.