ಮತದಾನ ಕೇಂದ್ರ ಬದಲಿಸದಿದ್ದರೆ ಮತದಾನ ಬಹಿಷ್ಕಾರ

ತಿ.ನರಸೀಪುರ: ಏ.24:- ಮತದಾನ ಮಾಡಲು ಐದು ಕೀ.ಮೀ ನಡೆದು ಹೋಗಬೇಕಿರುವುದರಿಂದ ಸ್ವಂತ ಗ್ರಾಮದಲ್ಲೇ ಮತದಾನದ ವ್ಯವಸ್ಥೆ ಕಲ್ಪಿಸದಿದ್ದರೆ ಮತದಾನವನ್ನು ಬಹಿಷ್ಕರಿಸಲಾಗುವುದು ಎಂದು ವೀರಪ್ಪ ಒಡೆಯರಹುಂಡಿ ಗ್ರಾಮಸ್ಥರು ಆಗ್ರಹಪಡಿಸಿದರು.
ತಾಲೂಕಿನ ವೀರಪ್ಪ ಒಡೆಯರಹುಂಡಿ ಗ್ರಾಮದಲ್ಲಿ 500ಕ್ಕೂ ಹೆಚ್ಚು ಮತದಾರರಿದ್ದು,ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ,ವಿಧಾನ ಸಭೆ ಮತ್ತು ಸಂಸತ್ತಿನ ಚುನಾವಣೆಗಳ ವೇಳೆ ಇಲ್ಲಿನ ಮತದಾರರು ಮತದಾನ ಮಾಡಲು 5ಕೀ.ಮೀ ದೂರದ ಚಿಕ್ಕಬೂವಳ್ಳಿ ಗ್ರಾಮದ ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಬೇಕಾದ ಅನಿವಾರ್ಯತೆ ಬಂದಿದೆ.
ಕ್ಷೇತ್ರ ಪುನರ್ ವಿಂಗಡಣೆಗೆ ಮುನ್ನ ಈ ಗ್ರಾಮ ಬನ್ನೂರು ವಿಧಾನ ಸಭಾ ವ್ಯಾಪ್ತಿಗೆ ಒಳಪಟ್ಟಿದ್ದು,ಈಗ ತಿ.ನರಸೀಪುರ ಮೀಸಲು ವಿಧಾನ ಸಭಾ ವ್ಯಾಪ್ತಿಗೆ ಸೇರಿದೆ.ಕಳೆದ 20ವರ್ಷಗಳ ಹಿಂದೆ ವೀರಪ್ಪಒಡೆಯರಹುಂಡಿ ಗ್ರಾಮದಲ್ಲೇ ಮತದಾನ ನಡೆಯುತ್ತಿತ್ತು.ಆದರೆ,ಒಂದು ಆಕಸ್ಮಿಕ ಘಟನೆಯಿಂದ ಮತದಾನ ಕೇಂದ್ರವನ್ನು ದೂರದ ಚಿಕ್ಕಬೂವಳ್ಳಿ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ ಎಂದು ಗ್ರಾಮಸ್ಥರಾದ ಪ್ರಭುಸ್ವಾಮಿ ದೂರಿದರು.
ಮತದಾನದ ಸಮಯದಲ್ಲಿ ಗ್ರಾಮದ ಜನತೆ ತುಂಬ ಕಷ್ಟಪಡುತ್ತಿದ್ದು,ಮತದಾನ ಕೇಂದ್ರ ಬದಲಾವಣೆ ಮಾಡಿಕೊಡುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಹಾಗಾಗಿ ಈ ಬಾರಿ ಮತದಾನ ಕೇಂದ್ರ ಬದಲಾವಣೆ ಮಾಡದಿದ್ದಲ್ಲಿ ನಮ್ಮ ಗ್ರಾಮದಲ್ಲಿ ಮನದಾನ ಬಹಿಷ್ಕಾರ ಮಾಡಲಾಗುವುದು ಎಂದರು.
ಸಂದರ್ಭದಲ್ಲಿ ಶಂಕರಪ್ಪ ,ಕುಮಾರಸ್ವಾಮಿ ,ಮಂಜುನಾಥ್, ಗಿರೀಶ್, ಶಂಕರಪ್ಪ ಇನ್ನಿತರ ಗ್ರಾಮಸ್ಥರು ಹಾಜರಿದ್ದರು.