ಬಳ್ಳಾರಿ,ಏ.10: ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ತಪ್ಪದೆ ಚಲಾಯಿಸುವಂತೆ ಮಾಡಲು ಹಾಗೂ ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತದಾನ ಒಂದು ಜವಾಬ್ದಾರಿಯುತ ಹಕ್ಕಾಗಿದ್ದು, ಪ್ರತಿಯೊಬ್ಬರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎನ್ನುವ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿಯಿಂದ ಭಾನುವಾರ ನಗರದ ವಿವಿಧ ಮುಖ್ಯ ರಸ್ತೆಗಳಲ್ಲಿ ಬೈಕ್ ಱ್ಯಾಲಿ ಮೂಲಕ ಜಾಗೃತಿ ನಡೆಸಲಾಯಿತು.
ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ಪಿಸ್ಟನ್ ಬುಲ್ ರೈಡರ್ಸ್ ಕ್ಲಬ್ ಮತ್ತು ಹಂಪಿ ರೈಡರ್ಸ್ ಕ್ಲಬ್ ಇವರಿಂದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಅಂಗವಾಗಿ ಮತದಾನ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಬೈಕ್ ಱ್ಯಾಲಿಗೆ ಸುಧಾ ಕ್ರಾಸ್ ಬಳಿಯ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾಗದಲ್ಲಿ 94 – ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಎಸ್.ಎನ್.ರುದ್ರೇಶ್ ಅವರು ಚಾಲನೆ ನೀಡಿದರು.
ಜಿಲ್ಲಾ ಪಂಚಾಯತ್‍ನ ಯೋಜನಾ ನಿರ್ದೇಶಕ ಪ್ರಮೋದ್ ಸೇರಿದಂತೆ ಸ್ವೀಪ್ ಸಮಿತಿ ಅಧಿಕಾರಿಗಳು, ಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಬೈಕ್ ರೈಡರ್ಸ್ಗಳು ಭಾಗವಹಿಸಿದ್ದರು.
ಬೈಕ್ ಱ್ಯಾಲಿಯು ಸುಧಾ ಕ್ರಾಸ್ ಬಳಿಯ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾಗದಿಂದ ಆರಂಭವಾಗಿ ಇನ್ ಫೆಂಟ್ರಿ ರಸ್ತೆ, ಅಗ್ನಿಶಾಮಕ ದಳ ಕಚೇರಿಯಿಂದ ಎಸ್.ಪಿ ವೃತ್ತ ಮಾರ್ಗವಾಗಿ ದುರ್ಗಮ್ಮ ಗುಡಿ ಮೂಲಕ ಕೆಇಬಿ ವೃತ್ತ, ಸಂಗಂ ವೃತ್ತದಿಂದ ಬೆಂಗಳೂರು ರಸ್ತೆ ಮೂಲಕ ಜೈನ್ ಮಾರ್ಕೆಟ್ ಮಾರ್ಗವಾಗಿ ಮೋತಿ ವೃತ್ತದಿಂದ ರಂಗಮಂದಿರ, ಕೌಲ್ ಬಜಾರ್ ಮೊದಲನೇ ಗೇಟ್ ನಿಂದ ಬೆಳಗಲ್ ಕ್ರಾಸ್, ಹೊಸಪೇಟೆ ರಸ್ತೆಯಿಂದ ಮರಳಿ ಸುಧಾಕ್ರಾಸ್ ಬಳಿ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಕೊನೆಗೊಂಡಿತು.