ಮತದಾನ ಕುರಿತು ಗೋಗಿ ಗ್ರಾಮದಲ್ಲಿಎತ್ತಿನ ಬಂಡಿಯ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ

ಕಲಬುರಗಿ,ಏ.26:ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಪ್ರಯುಕ್ತ ಮತದಾನ ಜಾಗೃತಿ ಅಭಿಯಾನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಮಲಾಪುರ ತಾಲೂಕು ಸ್ವೀಪ್ ಸಮಿತಿ ಹಾಗೂ ಕಮಲಾಪುರ ತಾಲೂಕು ಪಂಚಾಯಿತಿ ವತಿಯಿಂದ ಕಮಲಾಪೂರ ತಾಲೂಕಿನ ಜೀವಣಗಿ ಗ್ರಾಮ ಪಂಚಾಯಿತಿಯ ಗೋಗಿ ಗ್ರಾಮದಲ್ಲಿ ಕಲಬುರಗಿ ಗ್ರಾಮೀಣ ಎಂ.ಸಿ.ಸಿ. ನೋಡಲ್ ಅಧಿಕಾರಿ ವೀರಣ್ಣಾ ಕೌಲಗಿ ಹಾಗೂ ಕಮಲಾಪೂರ ತಾಲೂಕು ಪಂಚಾಯತ್‍ನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಂಬರೀಶ ಪಾಟೀಲ ಅವರು ಬುಧವಾರ ಎತ್ತಿನ ಬಂಡಿಯ ಮೂಲಕ ಗ್ರಾಮಸ್ಥರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಿದರು.

ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಮತದಾರರು 2023ರ ಮೇ 10ರಂದು ತಪ್ಪದೆ ಮತದಾನ ಮಾಡಬೇಕು. ಮತದಾನ ಮಾಡುವುದು ನಮ್ಮೆಲ್ಲರ ಹಕ್ಕಾಗಿದ್ದು, ನಾವು ಸ್ವಇಚ್ಛೆಯಿಂದ ಮತದಾನ ಮಾಡಬೇಕು. ಇದೇ ಸಂದರ್ಭದಲ್ಲಿ ಮತದಾನದ ಮಹತ್ವವನ್ನು ತಿಳಿಸಲಾಯಿತು.

ಇದೇ ಸಂದರ್ಭದಲ್ಲಿ ಎಲ್ಲರಿಗೂ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಈ ಸಂದರ್ಭದಲ್ಲಿ ಜೀವಣಗಿ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಾನಂದಾ ಹಾಗೂ ಜೀವಣಗಿ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.