ಮತದಾನ ಅಗತ್ಯ: ಡಾ. ಹನಗಂಡಿ

ಮುಂಡರಗಿ,ಏ7: ಉತ್ತಮ ನಾಳೆಗಳು ಬರಬೇಕಾದರೆ ತಪ್ಪದೇ ಎಲ್ಲರೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಬೇಕೆಂದು ತಾಲೂಕು ಪಂಚಾಯತ ಕಾರ್ಯನಿರ್ವಣಾಧಿಕಾರಿ ಡಾ.ಯುವರಾಜ್ ಹನಗಂಡಿ ಕರೆ ನೀಡಿದರು. ಶಿಂಗಟಾಲೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೀರನಹಳ್ಳಿ ಗ್ರಾಮದ ಬಳಿ ಬಾಂದಾರ ಹೂಳೆತ್ತುವ ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ನರೇಗಾ ಕೂಲಿ ಕಾರ್ಮಿಕರಿಗೆ ಮತದಾನದ ಮಹತ್ವ ತಿಳಿಸಿ ಅವರು ಮಾತನಾಡಿದರು.
ದೇಶದ ಸುಭದ್ರ ಭವಿಷ್ಯಕ್ಕಾಗಿ ಪ್ರತಿಯೊಬ್ಬರು ತಪ್ಪದೇ ಮತದಾನ ಚಲಾಯಿಸಿ. ಜಗತ್ತಿನಲ್ಲಿಯೇ ಅತಿದೊಡ್ಡ ಸಂವಿಧಾನ ಹೊಂದಿರುವ ಭಾರತದಲ್ಲಿ ಚುನಾವಣೆ ಮಹತ್ವ ದೊಡ್ಡದು. ಮತದಾರ ಜಾಗೃತಿಯಾದರೆ ದೇಶದ ಭವಿಷ್ಯ ಉತ್ತಮ ದಿಕ್ಕಿನಲ್ಲಿ ಮುನ್ನಡೆಯುತ್ತದೆ. ಜನರಿಗಾಗಿ ಇರುವ ಸರಕಾರವನ್ನು ಜನರೇ ಆಯ್ಕೆ ಮಾಡುವ ಹಕ್ಕಿರುವುದು ಸಂವಿಧಾನದ ಮೌಲ್ಯವಾಗಿದೆ. ಪ್ರತಿಯೊಬ್ಬರು ತಮ್ಮ ಹಕ್ಕನ್ನು ತಪ್ಪದೇ ಚಲಾಯಿಸಬೇಕು ಎಂದು ಕರೆ ನೀಡಿದರು. ಇದೇ ವೇಳೆ ನರೇಗಾ ಕೂಲಿ ಕಾರ್ಮಿಕರಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿ, ನರೇಗಾ ಯೋಜನೆಯ ಸಮರ್ಪಕ ಲಾಭವನ್ನು ದುಡಿಮೆಯ ಮೂಲಕ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ತಾಂತ್ರಿಕ ಸಂಯೋಜಕ ಹರೀಶ ಮೊರಬದ, ಮಾಹಿತಿ ಮತ್ತು ಶಿಕ್ಷಣ ಸಂಯೋಜಕ ಸಿದ್ದು ಸತ್ಯಣ್ಣವರ, ತಾಂತ್ರಿಕ ಸಹಾಯಕಿ ಶಾಂತಾ ತಿಮ್ಮಾರೆಡ್ಡಿ ಸೇರಿದಂತೆ ತಾಲೂಕು ಪಂಚಾಯತ್ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಹಾಜರಿದ್ದರು.