ಬ್ಯಾಡಗಿ,ಏ.26: ಮತದಾನವು ಮೂಲಭೂತ ಹಕ್ಕುಗಳ ಜೊತೆಗೆ ನಮ್ಮ ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದಲೂ ಮುಖ್ಯವಾಗಿದೆ ಎಂದು ಗ್ರಾಪಂ ಅಭಿವೃಧ್ದಿ ಅಧಿಕಾರಿ ಬಸವರಾಜಗೌಡ ಶಿಡ್ರಳ್ಳಿ ಹೇಳಿದರು.
ತಾಲೂಕಿನ ಹಿರೇಅಣಜಿ ಗ್ರಾಮ ಪಂಚಾಯತ ವ್ಯಾಪ್ತಿಯ ಚಿಕ್ಕಣಜಿ ಗ್ರಾಮದ ಹಳೇ ಊರಿನಿಂದ, ಜಯಪ್ಪ ಬಡಿಗೇರ ಹೊಲದವರಿಗೆ ನರೇಗಾ ಯೋಜನೆಯಡಿ ಕೈಗೆತ್ತಿಕೊಂಡಿರುವ ನೀರುಗಾಲುವೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ತಾಲೂಕಾ ಸ್ವೀಪ್ ಸಮೀತಿ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾನ ಪ್ರಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಚುನಾವಣೆಯಲ್ಲಿ ಭಾಗವಹಿಸಲು ಜನರನ್ನು ಉತ್ತೇಜಿಸಲು ಮತದಾನ ಪ್ರಚಾರಗಳು ಮುಖ್ಯವಾಗಿದೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ಜನರು ಭಾಗವಹಿಸುವಂತೆ ಮತ್ತು ಅವರ ಧ್ವನಿಯನ್ನು ಕೇಳುವಂತೆ ಮಾಡುವುದು ಮತದಾನದ ಅಭಿಯಾನದ ಗುರಿಯಾಗಿದೆ ಎಂದು ತಿಳಿಸಿದರು.
ತಾಲೂಕಾ ನರೇಗಾ ಯೋಜನೆಯ ಸಂಯೋಜಕ ಶಾನವಾಜ್ ಚಿಣಗಿ ಮಾತನಾಡಿ, ಮತದಾನದ ಪ್ರಭಾವ ಯಾವುದೇ ಚುನಾವಣೆಯಲ್ಲಿ, ಫಲಿತಾಂಶವನ್ನು ಕೆಲವೇ ಮತಗಳಿಂದ ನಿರ್ಧರಿಸಬಹುದು. ಅದಕ್ಕಾಗಿಯೇ ನಿಮ್ಮ ಮತವು ತುಂಬಾ ಮುಖ್ಯವಾಗಿದೆ ನಾಗರೀಕ ಕರ್ತವ್ಯವನ್ನು ಚಲಾಯಿಸಲು ಮತ್ತು ಸಮಾಜದ ಸಕ್ರಿಯ ಸದಸ್ಯರಾಗಲು ಮತದಾನವು ಒಂದು ಪ್ರಮುಖ ಮಾರ್ಗವಾಗಿದೆ ಎಂದು ತಿಳಿಸಿದರಲ್ಲದೇ, ಕೂಲಿ ಕಾರ್ಮಿಕರಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಅಭಿಯಾನದಲ್ಲಿ ರಂಗೋಲಿ ಹಾಕುವುದರ ಮೂಲಕ ನರೇಗಾ ಕೂಲಿಕಾರರಿಗೆ ಮತದಾನ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಸಿಬ್ಬಂದಿಗಳಾದ ಪ್ರಕಾಶ ಬಾರ್ಕಿ, ಹನುಮಗೌಡ ಲಿಂಗನಗೌಡರ, ರೇಖಾ ಸತೀಶ ಮುತ್ತಳ್ಳಿ, ಕುಮಾರಿ ಲಮಾಣಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.