ಗದಗ, ಏ.2 : ವಿಧಾನ ಸಭಾ ಚುನಾವಣೆಯಲ್ಲಿ ಪ್ರತಿ ಮತದಾರನು ತನಗೆ ಒದಗಿಸಿದ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ ಅವರು ತಿಳಿಸಿದರು.
ಅವರು ಮುಂಡರಗಿ ತಾಲೂಕಿನ ಬಾಗೇವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತದಾನ ಕೇಂದ್ರಕ್ಕೆ ಭೇಟಿ ನೀಡಿ ಮತದಾನ ಕೇಂದ್ರದಲ್ಲಿನ ಸಿದ್ಧತೆಗಳ ಕುರಿತು ಪರಿಶೀಲಿಸಿ ನಂತರ ಗ್ರಾಮದ ಸಾರ್ವಜನಿಕರಿಗೆ ಮತದಾನದ ಮಹತ್ವ ಕುರಿತು ಪಾಠ ಮಾಡಿದರು. ಮತದಾನ ನಮ್ಮ ಹಕ್ಕು ಅದನ್ನು ಅರ್ಹರಿಗೆ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಸುಭದ್ರವಾಗಿಸೋಣ ಪ್ರತಿ ಮತ ಅಮೂಲ್ಯವಾಗಿದ್ದು ಅದರ ಶಕ್ತಿ ಅಪಾರವಾಗಿದೆ. ಮತದಾನದ ದಿನದಂದು ತಪ್ಪದೇ ಮತದಾನ ಕೇಂದ್ರಕ್ಕೆ ಆಗಮಿಸಿ ನಮ್ಮ ಮತದಾನದ ಹಕ್ಕನ್ನು ಚಲಾಯಿಸೋಣ. ಈ ಮೂಲಕ ಸುಭದ್ರ ಪ್ರಜಾಪ್ರಭುತ್ವ ನಿರ್ಮಾಣದಲ್ಲಿ ನಾವೆಲ್ಲ ಭಾಗಿಯಾಗೋಣ ಎಂದು ನೆರೆದ ಸಾರ್ವಜನಿಕರಿಗೆ ತಿಳಿಸಿದರು.
ಮತದಾನ ಕಡಿಮೆಯಾದ ವಾರ್ಡಗಳನ್ನು ಗುರುತಿಸಿ ಮತದಾನ ಕಡಿಮೆಯಾಗಿರುವ ಬಗ್ಗೆ ಸೂಕ್ತ ಕಾರಣ ತಿಳಿದು ಪರಿಹಾರ ಕಂಡುಕೊಳ್ಳಬೇಕು. ಹಾಗೂ ಮತದಾನ ಅಧಿಕಗೊಳಿಸಲು ಪ್ರತಿ ಮತದಾರರಿಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಣಾಮಕಾರಿಯಾಗಿಸಬೇಕು. ದುಡಿಮೆಗಾಗಿ ಬೇರೆಡ ವಲಸೆ ಹೋದ ಕಾರ್ಮಿಕರನ್ನು ಮತದಾನದ ದಿನದಂದು ಆಗಮಿಸಿ ಮತ ಚಲಾಯಿಸುವಂತೆ ತಿಳಿ ಹೇಳಬೇಕು. ಮತದಾನವು ಹಬ್ಬದಂತೆ ಪ್ರತಿಯೊಬ್ಬರು ಆಚರಿಸುವಂತಾಗಬೇಕು. ಮತದಾನದ ಶಕ್ತಿಯನ್ನು ಪ್ರತಿ ಪ್ರಜೆಯೂ ಮತದಾನ ಮಾಡುವ ಮೂಲಕ ಪ್ರದರ್ಶಿಸಬೇಕು ಎಂದರು.
ಈ ಸಂಧರ್ಬದಲ್ಲಿ ತಹಶೀಲ್ದಾರ ಶೃತಿ ಮಲ್ಲಪಗೌಡರ, ತಾ.ಪಂ. ಕಾರ್ಯನಿವಾಹಕ ಅಧಿಕಾರಿ ಯುವರಾಜ್ ಹುನಗುಂಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ. ಪಿ.ಡಿ.ಓ ಸಂತೋಷ ಮೇಟಿ, ಬಿ.ಎಲ್.ಓ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.