
ವಿಜಯಪುರ: ಮೇ.6:ಬಬಲೇಶ್ವರ ತಾಲೂಕಿನ ಜೈನಾಪುರ ಗ್ರಾಮ ಪಂಚಾಯತ ವತಿಯಿಂದ ಮದುವೆಯ ಆಮಂತ್ರಣ ಪತ್ರಿಕೆ ರೀತಿಯಲ್ಲಿ ಮತದಾನದ ಕರೆಯೋಲೆ ಪತ್ರ ತಯಾರಿಸಿ ಮತದಾರರನ್ನು ಜಾಗೃತಿ ಮೂಡಿಸುವ ಮೂಲಕ ವಿನೂತನ ಪ್ರಯೋಗ ಮಾಡಿ ವಿಶಿಷ್ಠ ರೀತಿಯಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಆಮಂತ್ರಣ ಪತ್ರಿಕೆಯಲ್ಲಿ , ದಿನದ ವೈಶಿಷ್ಟತೆ ದಿನಾಂಕ, ಮಹೂರ್ತವನ್ನು ಮತಗಟ್ಟೆಯ ವಿಳಾಸ ಸಮೇತ ಉಲ್ಲೇಖಿಸಿ. ಈ ಚುನಾವಣಾ ಉತ್ಸವವನ್ನು ಮೇ-10ರಂದು ಕರ್ನಾಟಕ ಚುನಾವಣಾ ಆಯೋಗ ನಿಶ್ಚಯಿಸುವುದರಿಂದ ಸಹ ಕುಟುಂಬ ಸಮೇತರಾಗಿ ಆಗಮಿಸಿ ತಮ್ಮ ಸ್ವ ಇಚ್ಛೆಯಂತೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಭಾರತದ ಭವಿಷ್ಯವನ್ನು ರೂಪಿಸಬೇಕೆಂದು ಆಮಂತ್ರಣ ಪತ್ರಿಕೆಯಲ್ಲಿ ಸಾರ್ವಜನಿಕರಿಗೆ ವಿನಂತಿಸಲಾಗಿದೆ. ಮತದಾರ ಸೆಳೆಯಲು ಗ್ರಾಮ ಪಂಚಾಯಿತಿ ವತಿಯಿಂದ ಮನೆ-ಮನೆಗೆ ಭೇಟಿ ನೀಡಿ, ವಾರದ ಸಂತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಭೇಟಿಯಾಗಿ ಮತದಾನದ ಕರೆಯೋಲೆ ಪತ್ರ ನೀಡಿ ಆಮಂತ್ರಿಸಿ ಮತದಾನ ಮಾಡುವಂತೆ ಜನರಿಗೆ ವಿನಂತಿಸುವ ಮೂಲಕ ವಿನೂತನವಾಗಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಹೇಶ ಕಗ್ಗೊಡದವರ್, ತಾಲೂಕು ಐಇಸಿ ಸಂಯೋಜಕರಾದ ಶಾಂತಪ್ಪ ಇಂಡಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ರಫೀಕ್ ವಾಲಿಕಾರ, ಶಶಿಕಾಂತ ಗಡಚಿ, ಶಿಕಂದರ್ ಮುಲ್ಲಾ, ಸಂಗಮೇಶ್ ಚಲವಾದಿ, ಪರಶು ಕೋಲಕಾರ, ಶ್ರೀಮತಿ ಗೀತಾ ಕಲ್ಲವಗೊಳ ಸೇರಿದಂತೆ ಇತರರು ಉಪಸ್ಥಿತರಿದ್ದರು.