ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಏ.09 ಚುನಾವಣೆ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು, ಸಿಬ್ಬಂದಿಗಳು ಸೂಕ್ತ ಕ್ರಮವಹಿಸಿ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿ, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತದಾನದ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸುವಂತೆ ಜಿಲ್ಲಾ ಎಂಸಿಸಿ ನೋಡಲ್ ಅಧಿಕಾರಿ ವಿಜಯನಗರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಸದಾಶಿವ ಪ್ರಭು ಹೇಳಿದರು.
ಪಟ್ಟಣದ ತಾಲೂಕ ಆಡಳಿತ ಸೌಧದ ಸಭಾಂಗಣದಲ್ಲಿ ಎಂಸಿಸಿ ಅಡಿ ನಿಯೋಜಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಶನಿವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗ ನೀಡಿದ ಸೂಚನೆಗಳು ಹಾಗೂ ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವ ನಿಮಿತ್ತ ವಿವಿಧ ತಂಡಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ನಿಯೋಜಿಸಿ ಆದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದ ಅವರು, ಅಕ್ರಮಗಳು ಕಂಡು ಬಂದರೆ ಅಥವಾ ದೂರುಗಳು ಕೇಳಿ ಬಂದರೆ ತಕ್ಷಣ ಕ್ರಮಕ್ಕೆ ಮುಂದಾಗಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ಚುನಾವಣೆ ಬಳಿಕ ಎದುರಾಗುವ ಸಮಸ್ಯೆ, ಭಯಕ್ಕೆ ಈಗ ಕೆಲಸ ಮಾಡಿದರೆ ತಕ್ಷಣವೇ ಶಿಕ್ಷೆ ಕಟ್ಟಿಟ್ಟ ಬುತ್ತಿ. ಆದ್ದರಿಂದ ಮುಂದಿನ ದಿನಗಳಿಗೆ ಆಲೋಚನೆ ಮಾಡದೆ ನಿಷ್ಪಕ್ಷವಾಗಿ ಕೆಲಸ ಮಾಡಬೇಕು. ಚೆಕ್‌ಪೋಸ್ಟ್ ಹಾಗೂ ಮತದಾನ ವೇಳೆ ಸಂವಾದ ಮಾಡುವಾಗ ಬಹಳ ಎಚ್ಚರ ವಹಿಸಿ ನಡೆದುಕೊಳ್ಳಬೇಕು. ಎಲ್ಲರಿಗೂ ಒಂದೇ ರೀತಿಯ ನಡೆ ತೋರಬೇಕು. ಯಾವುದೇ ರೀತಿಯಲ್ಲಿ ಭಯ ಬೀಳುವ ಆತಂಕ ಬೇಡ. ಸಮಸ್ಯೆಗಳು ಎದುರಾದರೆ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ತಾಲ್ಲೂಕು ಚುನಾವಣಾಧಿಕಾರಿ ತೇಜಾನಂದ ರೆಡ್ಡಿ, ತಹಶೀಲ್ದಾರ ಚಂದ್ರಶೇಖರ ಶಂಬಣ್ಣ, ಕಾರ್ಯನಿರ್ವಾಹಕ ಅಧಿಕಾರಿ ಜಿ.ಪರಮೇಶ್ವರ, ಸಿಪಿಐ ಬಿ.ಮಂಜಣ್ಣ , ಅಬಕಾರಿ ನಿರೀಕ್ಷಕರು ಶ್ರೀಮತಿ ಛಾಯಾ, ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ ಮರಿಯಮ್ಮನಹಳ್ಳಿ ಪ.ಪಂ. ಮುಖ್ಯಾಧಿಕಾರಿ ಫಕೃದ್ದೀನ್, ಕೊಟ್ಟೂರು ಪ.ಪಂ. ಮುಖ್ಯಾಧಿಕಾರಿ ನಸೃಲ್ಲಾ , ಎಲ್ಲಾ 23 ಸೆಕ್ಟರ್ ಅಧಿಕಾರಿಗಳು, ಎಫ್‌ಎಸ್‌ಟಿ, ಎಸ್ಸೆಸ್ಟಿ, ವಿಎಸ್ಟಿ, ವಿವಿಟಿ, ಇಎಂಟಿ ತಂಡಗಳು ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಮತ್ತು ಗ್ರಾಪಂ ಪಿಡಿಒಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.