ಮತದಾನದ ಪ್ರಮಾಣ ಹೆಚ್ಚಳಕ್ಕಾಗಿ ಅಪಾರ್ಟ್‌ಮೆಂಟ್ ಅಭಿಯಾನಕ್ಕೆ ಚಾಲನೆ

ಮಂಗಳೂರು, ಎ.೧೪- ರಾಜ್ಯದಲ್ಲಿ ಮೇ ೧೦ ಪ್ರಜಾಪ್ರಭುತ್ವದ ಹಬ್ಬವಾಗಿದೆ. ಹಾಗಾಗಿ ಪ್ರತಿಯೊಬ್ಬ ಅರ್ಹ ಮತದಾರ ಅಂದು ತಮ್ಮ ಹಕ್ಕನ್ನು ಚಲಾಯಿಸಬೇಕು. ನಿರ್ಭೀತಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಯೂ ಆಗಿರುವ ದ.ಕ.ಜಿಪಂ ಸಿಇಒ ಡಾ. ಕುಮಾರ್ ಕರೆ ನೀಡಿದರು.
ಸ್ವೀಪ್ ಕಾರ್ಯಚಟುವಟಿಕೆಯ ಅಂಗವಾಗಿ ನಗರದ ಕ್ಯಾಪಿನೋ ಅಪಾರ್ಟ್‌ಮೆಂಟ್‌ನಲ್ಲಿ ಗುರುವಾರ ಅಪಾರ್ಟ್ ಮೆಂಟ್ ಕ್ಯಾಂಪೇನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ನಗರ ಪ್ರದೇಶದಲ್ಲಿ ಮತದಾನದ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಅಪಾರ್ಟ್‌ಮೆಂಟ್ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಅಪಾರ್ಟ್ ಮೆಂಟ್‌ನ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಒಳಗೊಂಡಂತೆ ಸರಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡಿ ಮತದಾನದ ಮಹತ್ವದ ಬಗ್ಗೆ ತಿಳಿಸಿಕೊಡಲಿದೆ. ಅದಕ್ಕೆ ಯಕ್ಷಗಾನದ ಸ್ಪರ್ಶ ನೀಡಲಾಗಿದೆ, ಸಿಗ್ನೇಚರ್ ಆಂದೋಲನ ಕೂಡ ಮಾಡಲಾಗಿದೆ. ಈ ಆಂದೋಲನದಲ್ಲಿ ಸಹಿ ಮಾಡಿದವರು ಮಾನಸಿಕವಾಗಿ ಮತದಾನ ಮಾಡುವ ಸ್ಥಿತಿಗೆ ತಲುಪಿರುವ ಸಾಧ್ಯತೆಗಳಿರುತ್ತದೆ. ಅದೇ ರೀತಿ ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಹಮ್ಮಿಕೊಂಡು ಮತದಾನ ಜಾಗೃತಿಗೆ ಕ್ರಮವಹಿಸಲಾಗುತ್ತಿದೆ ಎಂದು ಡಾ. ಕುಮಾರ್ ಹೇಳಿದರು. ಶೇ.೪೦-೫೦ರಷ್ಟು ಜನರು ಮಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿ ಆ?ಯಂಡ್ ಸೋಶಿಯಲ್ ಚೇಂಗ್ ಎಂಬ ಸಂಶೋಧನಾ ಸಂಸ್ಥೆಯ ವರದಿಯಂತೆ ಅಪಾರ್ಟ್ ಮೆಂಟ್‌ಗಳಲ್ಲಿ ವಾಸಿಸುವವರು ಮತದಾನದಿಂದ ಹಿಂದುಳಿದಿರುತ್ತಾರೆ. ಅವರಲ್ಲಿ ಹೆಚ್ಚಿನ ಆಸಕ್ತಿ ಇರದು ಎಂಬ ಸಮೀಕ್ಷಾ ವರದಿ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ.ಕುಮಾರ್ ನುಡಿದರು. ಕ್ಯಾಪಿನೋ ಅಪಾರ್ಟ್‌ಮೆಂಟ್ ಸಂಘದ ಅಧ್ಯಕ್ಷ ರಾಮ್ ಪ್ರಸಾದ್, ಕಾರ್ಯದರ್ಶಿ ಉಮೇಶ್ ರಾವ್, ನೋಡಲ್ ಅಧಿಕಾರಿ ರಾಜಶೇಖರ್, ಇಎಲ್‌ಸಿ ಅಧಿಕಾರಿ ಪುಷ್ಪಲತಾ, ಬಿಎಲ್‌ಒ ಗೀತಾಂಜಲಿ ಮತ್ತಿತರರು ಉಪಸ್ಥಿತರಿದ್ದರು.