ಮತದಾನದ ಪಟ್ಟಿಗೆ ಸೇರಲು ಡಿ.೧೭ ಕಡೆದಿನ : ತಹಶೀಲ್ದಾರ್

ಮಧುಗಿರಿ, ನ. ೨೨- ಜನವರಿ ೨೦೨೧ ಕ್ಕೆ ೧೮ ವರ್ಷ ತುಂಬಿದ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಚುನಾವಣಾ ಆಯೋಗವು ಅರ್ಜಿ ಆಹ್ವಾನಿಸಿದ್ದು, ಡಿಸೆಂಬರ್ ೧೭ ರವರೆಗೆ ಕಾಲಾವಕಾಶ ನೀಡಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ತಹಶೀಲ್ದಾರ್ ಡಾ.ವಿಶ್ವನಾಥ್ ತಿಳಿಸಿದ್ದಾರೆ.
ಪಟ್ಟಣದ ತಮ್ಮ ಕಚೇರಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜನವರಿ ೧ ೨೦೨೧ ಕ್ಕೆ ೧೮ ವರ್ಷ ತುಂಬಿದ ಯುವಕ-ಯುವತಿಯರು ಮತದಾನ ಮಾಡಲು ಅರ್ಹರಿರುತ್ತಾರೆ. ಅಂತವರು ಮತದಾನದ ಹಕ್ಕು ಪಡೆಯಲು ನೊಂದಣಿ ಮಾಡಸಬೇಕಾಗಿದೆ. ಅದಕ್ಕಾಗಿ ಸರ್ಕಾರ ಕಾಲಾವಕಾಶ ನೀಡಿದೆ. ನ.೧೮ ರಿಂದ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಹಕ್ಕು ಮತ್ತು ಆಕ್ಷೇಪಣೆಗಾಗಿ ಡಿ.೧೭ ರವರೆಗೂ ಕಾಲಾವಕಾಶ ನೀಡಿದೆ. ಮತದಾರರ ಸಂಖ್ಯೆ ಹೆಚ್ಚಳಕ್ಕಾಗಿ ನ.೨೨ ರಿಂದ ನ.೨೯, ಡಿ ೬ ರಿಂದ ಡಿ.೧೩ ರವರೆಗೂ ಭಾನುವಾರ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಜನವರಿ ೭, ೨೦೨೧ ರಂದು ಹಕ್ಕು ವಿಲೇವಾರಿ ನಡೆಸಲಿದ್ದು, ಜನವರಿ ೧೪ ರಂದು ಮತದಾರರ ಪಟ್ಟಿ ಸಿದ್ಧತೆ, ಜನವರಿ ೧೮ ರಂದು ಮತದಾರರ ಪಟ್ಟಿಯ ಅಂತಿಮ ಪ್ರಕಟಣೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಅವಕಾಶವನ್ನು ಯುವ ಸಮೂಹ ಸದ್ಬಳಕೆ ಮಾಡಿಕೊಳ್ಳುವಂತೆ ಅವರು ತಿಳಿಸಿದ್ದಾರೆ.