ಮತದಾನದ ನಂತರ ಸೋಲು-ಗೆಲುವಿನ ಲೆಕ್ಕಾಚಾರ ಬಿರುಸು!

ಶಿವಮೊಗ್ಗ, ಮೇ 11: ವಿಧಾನಸಭೆ ಸಾರ್ವತ್ರಿಕ ಚುನಾವಣೆ – 2023 ಮಹಾ ಸಮರಕ್ಕೆ ತೆರೆ
ಬಿದ್ದಿದೆ. ಮೇ 13 ರ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ನಡುವೆ ರಾಜಕೀಯ
ಪಕ್ಷ ಮಾತ್ರವಲ್ಲದೆ ಸಾರ್ವಜನಿಕ ವಲಯದಲ್ಲಿ ಅಭ್ಯರ್ಥಿಗಳ ಸೋಲು-ಗೆಲುವಿನ
ಲೆಕ್ಕಾಚಾರಗಳು ಬಿರುಸುಗೊಂಡಿವೆ!ಯಾವ ಅಸೆಂಬ್ಲಿ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ? ಯಾವ ಪಕ್ಷಕ್ಕೆ ಎಷ್ಟೆಷ್ಟು ಮತ
ಬೀಳಬಹುದು? ಯಾವ ಅಭ್ಯರ್ಥಿ ಗೆಲ್ಲಬಹುದು – ಸೋಲಬಹುದು? ಸೋಲು – ಗೆಲುವಿಗೆ
ಕಾರಣವಾಗುವ ಅಂಶಗಳೇನು? ಎಂಬಿತ್ಯಾದಿ ಚರ್ಚೆಗಳು ಸರ್ವೇ ಸಾಮಾನ್ಯವಾಗಿದೆ.
ಮತ್ತೊಂದೆಡೆ, ಕೆಲ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಅಸೆಂಬ್ಲಿ ಕ್ಷೇತ್ರಗಳ
ಪ್ರತಿಯೊಂದು ಬೂತ್ ನಲ್ಲಿ ಆಗಿರುವ ಮತದಾನದ ವಿವರ ಕಲೆ ಹಾಕುತ್ತಿದ್ದಾರೆ. ತಮ್ಮ
ಪಕ್ಷಗಳ ಬೂತ್ ಏಜೆಂಟ್ ಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದರ ಆಧಾರದ ಮೇಲೆ
ಯಾವ್ಯಾವ ಭಾಗದಲ್ಲಿ ಎಷ್ಟೆಷ್ಟು ಮತ ತಮಗೆ ಬಿದ್ದಿರಬಹುದು? ಎದುರಾಳಿಗಳ ಮತ ಗಳಿಕೆ
ಎಷ್ಟಿರಬಹುದು? ಎಂಬ ಊಹಾತ್ಮಕ ಲೆಕ್ಕಾಚಾರದಲ್ಲಿ ಮುಳುಗಿರುವುದು ಕಂಡುಬರುತ್ತಿದೆ.
ಬೆಟ್ಟಿಂಗ್: ಕೆಲ ರಾಜಕೀಯ ಕುತೂಹಲಿಗಳು, ಅಭ್ಯರ್ಥಿಗಳ ಬೆಂಬಲಿಗರು ಬೆಟ್ಟಿಂಗ್
ರಾಜಕಾರಣದಲ್ಲಿ ತೊಡಗಿದ್ದಾರೆ. ಅಭ್ಯರ್ಥಿಗಳ ಸೋಲು – ಗೆಲುವಿನ ಮೇಲೆ ಪಣ
ಕಟ್ಟುತ್ತಿದ್ದಾರೆ. ಭಾರೀ ಪ್ರಮಾಣದ ಬೆಟ್ಟಿಂಗ್ ನಡೆಯುತ್ತಿರುವ ಮಾಹಿತಿಗಳು ರಾಜಕೀಯ
ವಲಯದಿಂದ ಕೇಳಿ ಬರಲಾರಂಭಿಸಿದೆ. ಬಹುತೇಕ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಅಖಾಡ ಕಂಡುಬಂದಿದೆ. ಇದರಿಂದ ಯಾವಾ
ಕ್ಷೇತ್ರದಲ್ಲಿ ಯಾರು ಜಯ ಸಾಧಿಸುತ್ತಾರೆ ಎಂಬುವುದು ಊಹಿಸಲು ಆಗದಂತಾಗಿದೆ. ಯಾರೇ
ಗೆಲುವು ಸಾಧಿಸಿದರೂ ಅಂತರ ಕಡಿಮೆಯಿರಲಿದೆ ಎಂದು ರಾಜಕೀಯ ವಿಶ್ಲೇಷಕರು
ಅಭಿಪ್ರಾಯಪಡುತ್ತಾರೆ.