ಮತದಾನದ ಜಾಗೃತಿ ಬೆಳಕು ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.12: ಸೂರ್ಯ ಪಶ್ಚಿಮದಲ್ಲಿ ಸಣ್ಣಗೆ ಜಾರಿ ಕತ್ತಲು ಆವರಿಸುವ ಹೊತ್ತಿಗೆ ಮೂಡಿತು ಮೇಣದ ಬೆಳಕಿನ ಹೊಂಬೆಳಕು. ನನ್ನ ಮತ, ನನ್ನ ಹಕ್ಕು ಎಂಬ ಬೆಳಗಿದ ದೀಪಗಳು! ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ಮೇಣದ ಬತ್ತಿ ಹಿಡಿದು ಜಾಗೃತಿ ಮೂಡಿಸಿತು.
ತಾಲೂಕು ಸ್ವೀಪ್ ಕಾರ್ಯಕ್ರಮದ ಅಧ್ಯಕ್ಷರಾದ ಹಾಗೂ ತಾ.ಪಂ. ಇಓ  ಮಹಾಂತಗೌಡ ಪಾಟೀಲ್ ನೇತೃತ್ವದ ತಂಡವು ಮಂಗಳವಾರ ರಾತ್ರಿ ಮತದಾನ ಹಕ್ಕಿನ ಬೆಳಕು ಮೂಡಿಸಿತು.
ಈ ಬೆಳಕು ಕಂಡು ಬಂದಿದ್ದು,  ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದಲ್ಲಿ.ವಿಧಾನಸಭಾ ಚುನಾವಣಾ ಅಂಗವಾಗಿ ಮತದಾನ ಜಾಗೃತಿ ಮೂಡಿಸಲು  ಗ್ರಾಮದಲ್ಲಿ ವಿಶೇಷವಾಗಿ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಲಾಯಿತು. ಮೇಣದ ಬತ್ತಿ ಜಾಗೃತಿ ಜಾಥಾವು ಜಾಗೃತಿ ಗೀತೆಗಳೊಂದಿಗೆ ಆಗೋಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನಡೆದು ಗ್ರಾಮಸ್ಥರನ್ನು ಆಕರ್ಷಿಸಿತು..
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್ ಅವರು ಮಾತನಾಡಿ, ಯುವಕರು, ವೃದ್ಧರು, ವಿಕಲಚೇತನ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬೇಕು. ಶೇ.100 ರಷ್ಟು ಮತ ಚಲಾಯಿಸಿ ಯೋಗ್ಯ ಹಾಗೂ ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕು.
ದೇಶ, ನಾಡು ಕಟ್ಟುವಲ್ಲಿ ಪ್ರತಿಯೊಬ್ಬರ ಮತ ಮುಖ್ಯವಾಗಿರುತ್ತದೆ. ಯಾರೊಬ್ಬರೂ ಮತದಾನ ಮಾಡಲು ನಿಷ್ಕಾಳಜಿ ತೋರಬಾರದು. ಚುನಾವಣೆ ಎಂಬುದು ಪ್ರಜಾತಂತ್ರದ ಹಬ್ಬವಾಗಿದೆ. ಯಾರೂ ಆಸೆ, ಆಮೀಷಕ್ಕೆ ಒಳಗಾಗದೇ ಖುಷಿಯಿಂದ ಮತ ಚಲಾಯಿಸಬೇಕು ಎಂದರು.ಇದೇ ವೇಳೆ ಗ್ರಾಮಸ್ಥರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ತಾಲೂಕು ಯೋಜನಾಧಿಕಾರಿಗಳಾದ ಗುರುಪ್ರಸಾದ, ಪಿಡಿಓ ಕಾಶೀನಾಥ ಹಂಚಿನಾಳ, ಸ್ವೀಪ್ ಸಂಕಲನ ವಿಷಯ ನಿರ್ವಾಹಕರಾದ ಜುಬೇರ್ ನಾಯ್ಕ್, ವಿಷಯ ನಿರ್ವಾಹಕರಾದ ಭೀಮಣ್ಣ, ಶ್ರೀನಿವಾಸ, ತಾಪಂ ಸಿಬ್ಬಂದಿಗಳಾದ ಭೀಮಣ್ಣ, ಶ್ರೀನಿವಾಸ, ಶರಣಪ್ಪ, ರಾಘವೇಂದ್ರ, ವೀರನಗೌಡ, ಬಾಳಪ್ಪ ತಾಳಕೇರಿ, ಮಲ್ಲಿಕಾರ್ಜುನ, ಗ್ರಾಪಂ ಕಾರ್ಯದರ್ಶಿ ಉಮೇಶ, ಸಿಬ್ಬಂದಿಗಳಾದ ಮಂಜುನಾಥ, ಹನುಮಗೌಡ, ತಿಮ್ಮಣ್ಣ, ಗ್ರಾಮ ಕಾಯಕ ಮಿತ್ರರು, ಸ್ವಸಾಹಯ ಸಂಘದ ಮಹಿಳೆಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.