ಮತದಾನದ ಕುರಿತು ಜಾಗೃತಿ ಮೂಡಿಸುವ ಬೈಕ್ ರ್ಯಾಲಿಗೆ ಚಾಲನೆ

ಕಲಬುರಗಿ,ಏ.25 : ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಮತದಾನ ಕುರಿತು ಕಲಬುರಗಿ ತಾಲೂಕಿನ 28 ಗ್ರಾಮ ಪಂಚಾಯತಿಯಲ್ಲಿ (ಪ್ರತಿ ಗ್ರಾಮ ಪಂಚಾಯತ್‍ಗೆ 10 ಬೈಕ್‍ಗಳಂತೆ) ಬೈಕ್ ರ್ಯಾಲಿ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಕಲಬುರಗಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

   ಕಲಬುರಗಿ ತಾಲೂಕು ಪಂಚಾಯತಿ ಕಚೇರಿಯಿಂದ ಆರಂಭಗೊಂಡ ಬೈಕ್ ರ್ಯಾಲಿಯು ನಗರದ ಸರದಾರ ವಲ್ಲಭಾಯಿ ಪಟೇಲ ವೃತ್ತದಿಂದ ಮಿನಿ ವಿಧಾನಸೌಧ, ಜಗತ್ ಸರ್ಕಲ್, ತಿರಂದಾಜ್ ಸರ್ಕಲ್, ಅನ್ನಪೂರ್ಣ್ ಕ್ರಾಸ್, ಏಶಿಯನ್ ಮಾಲ್ ಗುಲ್ಲಾವಾಡಿ ಮಾರ್ಗವಾಗಿ ಕೆ.ಕೆ.ಆರ್.ಡಿ.ಬಿ.  ಕಚೇರಿ ಮೂಲಕ ಕಲಬುರಗಿ ತಾಲೂಕು ಪಂಚಾಯತಿ ಕಚೇರಿಗೆ ಬಂದು ಕೊನೆಗೊಂಡಿತು. ಈ ಸಂದರ್ಭದಲ್ಲಿ  ಮತದಾನ ಜಾಗೃತಿ ಅಭಿಯಾನದ ಕುರಿತು ಎಲ್ಲರಿಗೂ  ಪ್ರತಿಜ್ಞಾವಿಧಿ ಬೋಧಿಸಲಾಯಿತು. 

ಈ ಸಂದರ್ಭದಲ್ಲಿ ಕಲಬುರಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣಾ ಕೌಲಗಿ, ಸಹಾಯಕ ನಿರ್ದೇಶಕ ವಿಶ್ವನಾಥ್ ಎಮ್.ವೈ, ಐಇಸಿ ಸಂಯೋಜಕ ಮೋಸಿನ್ ಖಾನ್, ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಎಲ್ಲಾ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.