ಮತದಾನದಿಂದ ವಂಚಿತರಾಗದೇ ನಮ್ಮ ಹಕ್ಕನ್ನು ಚಲಾಯಿಸೋಣ

ವಿಜಯಪುರ:ಮೇ.6: ಸಂವಿಧಾನ ಒದಗಿಸಿರುವ ಹಕ್ಕಿನಿಂದ ಯಾರೂ ವಂಚಿತರಾಗದೇ ಪ್ರತಿಯೊಬ್ಬರನ್ನು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸೋಣ ಎಂದು ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ವಿಜಯಪುರ ವತಿಯಿಂದ ಶುಕ್ರವಾರ ನಗರದ ಗೋದಾವರಿ ಹೋಟೆಲ್ ಹತ್ತಿರದ ಸೆಟ್‍ಲೈಟ್ ಬಸ್ ನಿಲ್ದಾಣದ ಎದುರಿಗೆ ಹಮ್ಮಿಕೊಂಡ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು. ನಮಗೆ ಸಿಕ್ಕ ಅವಕಾಶವನ್ನು ನಾವೆಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು. ಯಾವುದೇ ಒತ್ತಡ, ಆಸೆ-ಆಮಿಷಗಳಿಗೆ ಒಳಗಾಗಿ ಮತವನ್ನು ಮಾರಿಕೊಳ್ಳದೇ ನಮ್ಮ ಹಕ್ಕನ್ನು ಚಲಾಯಿಸೋಣ. ನಮ್ಮ ಮುಂದಿನ ಪಿಳೀಗೆಯ ಉತ್ತಮ ಭವಿಷ್ಯಕ್ಕಾಗಿ ಎಲ್ಲರೂ ತಪ್ಪದೇ ಮತ ಚಲಾಯಿಸೋಣ ಎಂದು ಹೇಳಿದರು.
ಹೊಸ ಬಸ್ ನಿಲ್ದಾಣದಿಂದ ಪ್ರತಿ ನಿತ್ಯ ಬಹಳಷ್ಟು ಜನ ಕೂಲಿಕಾರ್ಮಿಕರು ನಗರದ ವಿವಿಧ ಸ್ಥಳಗಳಿಗೆ ಕೆಲಸಕ್ಕೆ ತೆರಳುವ ವಿಷಯವನ್ನು ಅರಿತ ಜಿಲ್ಲಾ ಸ್ವೀಪ್ ಸಮಿತಿ ಬೆಳಿಗ್ಗೆ ಕೂಲಿಕಾರರಿಗೆ, ಕರ ಪತ್ರ ಹಂಚಿ, ಜಾಗೃತಿ ಗೀತೆಗಳನ್ನು ಹಾಡಿ, ಮತದಾನ ಮಹತ್ವದ ಘೋಷಣೆಗಳನ್ನು ಕೂಗಿ ಅರಿವು ಮೂಡಿಸಲಾಯಿತು.
ವಿಜಯಪುರ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ,ಹೊಂಗಯ್ಯ ಅವರು ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ & ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಈಗಾಗಲೇ ಎಲ್ಲ ಕಡೆ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಆದರೆ, ಇಲ್ಲಿ ಪ್ರತಿ ದಿನ ಸಾವಿರಾರು ಜನರು ದಿನಗೂಲಿ ಅರಸಿ ಗ್ರಾಮಗಳಿಂದ ಬಂದು ಇಲ್ಲಿಂದ ವಿವಿಧ ಸ್ಥಳಕ್ಕೆ ಹೋಗುವುದನ್ನು ಅರಿತು ಈ ಸ್ಥಳದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಾಗೃತಿ ಕಾರ್ಯಕ್ರಮದಲ್ಲಿ ಪಡೆದುಕೊಂಡು ಮಾಹಿತಿಯನ್ನು ಪ್ರತಿಯೊಬ್ಬರು ತಮ್ಮ ನೆರೆ-ಹೊರೆಯವರನ್ನು ತಲುಪಿಸಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಕರೆ ನೀಡಿದ ಅವರು, ಜೊತೆಗೆ ಮತದಾನದ ದಿನದಂದು ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಶೌಚಾಲಯ ಹಾಗೂ ಪ್ರಥಮ ಚಿಕಿತ್ಸೆ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದ್ದರಿಂದ ಎಲ್ಲರೂ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಲು ಮನವಿ ಮಾಡಿಕೊಂಡರು.
ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಎಸ್.ಜಿ.ಖೈನೂರ, ಜಿಲ್ಲಾ ಪಂಚಾಯತಿಯ ಪೃಥ್ವಿರಾಜ ಪಾಟೀಲ, ಕಲ್ಲಪ್ಪ ನಂದರಗಿ, ಸುರೇಶ ಕೊಂಡಗುಳಿ, ತಾಲೂಕು ಪಂಚಾಯತಿಯ ಶ್ರೀಮತಿ ಎಸ್.ಎಸ್,ಅಳ್ಳಗಿ, ರಾಘವೇಂದ್ರ ಭಜಂತ್ರಿ, ಬಸವರಾಜ ಹುಣಸಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು & ಸಿಬ್ಬಂದ್ದಿಗಳು ಉಪಸ್ಥಿತರಿದ್ದರು.