ಮತದಾನದಲ್ಲಿ ಎಲ್ಲರೂ ಭಾಗವಹಿಸಲು ಕರೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮಾ.15: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಅವರು ಚಲಾಯಿಸುವ ಪ್ರತಿಯೊಂದು ಮತಕ್ಕೂ ಅದರದೇ ಆದ ಮೌಲ್ಯವಿದ್ದು 18 ವರ್ಷ ದಾಟಿದ ಎಲ್ಲರೂ ತಪ್ಪದೆ ಮತದಾನ ಮಾಡಬೇಕು ಎಂದು ತಹಶೀಲ್ದಾರ್ ಎನ್.ಆರ್ ಮಂಜುನಾಥ ಸ್ವಾಮಿ ತಿಳಿಸಿದರು.
 ನಗರದ ತಾಲೂಕು ಕ್ರೀಡಾಂಗಣ ದಿಂದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಎನ್.ಆರ್ ಮಂಜುನಾಥ ಸ್ವಾಮಿ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
 ವಿಧಾನಸಭಾ ಚುನಾವಣೆಯಲ್ಲಿಈ ಬಾರಿ ಜಿಲ್ಲೆಯಿಂದ ಶೇ. 100ರಷ್ಟು ಮತದಾನ ಗುರಿಯನ್ನು ಜಿಲ್ಲಾಡಳಿತ ಇಟ್ಟುಕೊಂಡಿದೆ. ಹೀಗಾಗಿ ಹಿಂದಿನ ಚುನಾವಣೆಗಳಲ್ಲಿ ಮತದಾನ ಕಡಿಮೆ ಆಗಿರುವ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಎಲ್ಲ ಮತಗಟ್ಟೆಗಳ ವ್ಯಾಪ್ತಿಯ ನೋಂದಾಯಿತ ಮತದಾರರು ಮತ ಚಲಾವಣೆ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಮತ್ತು ಕಡಿಮೆ ಮತದಾನ ಆಗಿರುವ ಮತ ಕೇಂದ್ರಗಳಲ್ಲಿಕನಿಷ್ಠ ಶೇ. 10ರಷ್ಟು ಮತದಾನ ಹೆಚ್ಚಳವಾಗುವಂತೆ ವಿಶೇಷ ಅರಿವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಅಧಿಕಾರಿ ಮಡಗಿನ ಬಸಪ್ಪ ಹೇಳಿದರು.
 ಜಿಲ್ಲೆಯಲ್ಲಿನ 18 ವರ್ಷ ತುಂಬಿದ ಹಾಗು 19 ವರ್ಷದೊಳಗಿನ ಇನ್ನೂ ಹಲವು ಜನರು ಮತದಾರ ಪಟ್ಟಿಗೆ ಸೇರ್ಪಡೆ ಆಗಿಲ್ಲ. ಅಂತವರನ್ನು ಗುರುತಿಸಿ ಪ್ರತಿ ವಯಸ್ಕ ಮತದಾರ, ಮತದಾರ ಪಟ್ಟಿಗೆ ಸೇರಿಸುವ ಮತ್ತು ಮತದಾನ ಮಾಡುವಂತೆ ಕ್ರಮವಹಿಸಲಾಗಿದೆ ಹಾಗೂ ಶಾಲಾ-ಕಾಲೇಜುಗಳಲ್ಲಿ ಸ್ಥಾಪಿಸಿರುವ ಚುನಾವಣಾ ಸಾಕ್ಷರತಾ ಕ್ಲಬ್ಗಳನ್ನು ಇನ್ನಷ್ಟು ಕ್ರಿಯಾಶೀಲ ಗೊಳಿಸಲಾಗಿದೆ. ಸ್ವೀಪ್ ಸಮಿತಿ ಈ ಬಾರಿ ಚುನಾವಣೆಗೂ ಮುನ್ನ ಜಿಲ್ಲೆಯಲ್ಲಿ ನಡೆಯುವ ವಿವಿಧ ಜಾತ್ರೆ, ಉತ್ಸಗಳಲ್ಲಿಯೂ ಮತದಾನದ ಕುರಿತು ಅರಿವು ಮೂಡಿಸುತ್ತಿದೆ ಎಂದು ತಾಲೂಕು ವೈದ್ಯಧಿಕಾರಿ ಡಾ.ಈರಣ್ಣ ತಿಳಿಸಿದರು.
 ಸಿ.ಡಿ.ಪಿ.ಒ ಜಲಾಲಪ್ಪ, ಸಮಾಜ ಕಲ್ಯಾಣಧಿಕಾರಿ ರಾಜೇಶ್ವರಿ, ತೋಟಗಾರಿಕೆ ಇಲಾಖೆ ಅಧಿಕಾರಿ ಮಹೇಶ್, ನೀರಾವರಿ ಮತ್ತು ಗ್ರಾಮೀಣ ಅಭಿವೃದ್ಧಿ ಅಧಿಕಾರಿ ರಾಜೇಂದ್ರ, ಪ್ರಾಧ್ಯಾಪಕ ಚಂದ್ರಕಾಂತ, ಕ್ಷೇತ್ರ ಶಿಕ್ಷಣಧಿಕಾರಿ ಗುರ್ರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಗಾದಿಲಿಂಗಪ್ಪ, .ಬಿ,ಆರ್.ಸಿ ತಮ್ಮನಗೌಡ ಪಟೇಲ್ ಹಾಗೂ ಆಶಾಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿಗಳು ಇದ್ದರು.