ಮತದಾನಕ್ಕೆ ಸಜ್ಜು

ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ರವರು ಇಂದು ವಿವಿಧ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಗಳೂರು, ಏ. ೨೫- ರಾಜ್ಯದ ೧೪ ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಾಳೆ ನಡೆಯಲಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ಸರ್ವಸಿದ್ಧತೆಯನ್ನು ಮಾಡಿಕೊಂಡಿದ್ದು, ಶಾಂತಿಯುತ ಮತದಾನಕ್ಕೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ.ನಾಳೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮೈಸೂರು ರಾಜವಂಶಸ್ಥ ಯದುವೀರ ದತ್ತ ಒಡೆಯರ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಒಟ್ಟು ೧೪ ಕ್ಷೇತ್ರಗಳಲ್ಲಿ ೨೪೭ ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಇವರುಗಳ ರಾಜಕೀಯ ಭವಿಷ್ಯಕ್ಕೆ ಮತದಾರರು ನಾಳೆ ಮುದ್ರೆ ಒತ್ತಲಿದ್ದಾರೆ.ನಾಳೆ ನಡೆಯಲಿರುವ ಮತದಾನಕ್ಕೆ ಒಟ್ಟು ೩೦,೪೦೨ ಮತ ಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟಾರೆ ೨, ೮೮, ೧೯, ೩೪೨ ಮತದಾರರು ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ. ಈ ಪೈಕಿ ೧,೪೪, ೨೮೦೯೯ ಪುರುಷರು, ೧, ೪೩, ೮೮, ೧೭೬ ಮಹಿಳೆಯರು ಮತ್ತು ೩೦೬೭ ತೃತೀಯ ಲಿಂಗಿಗಳಿದ್ದಾರೆ.ನಾಳೆ ಮತದಾನ ಶಾಂತಿಯುತವಾಗಿ ಹಾಗೂ ಸುಗಮವಾಗಿ ನಡೆಯಲು ಚುನಾವಣಾ ಆಯೋಗ ಎಲ್ಲ ತಯಾರಿ ಮಾಡಿದ್ದು, ಮತಗಟ್ಟೆ ಕೆಲಸಕ್ಕಾಗಿ ಸುಮಾರು ೧ ಲಕ್ಷ ೪೦ ಸಾವಿರ ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ನಾಳೆ ರಾಜ್ಯದ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಲೋಕಸಭೆ ಚುನಾವಣೆಗೆ ತೆರಳಲು ನಗರ ಶಾಲೆಯೊಂದರಲ್ಲಿ ಕುಳಿತಿರುವ ಸರ್ಕಾರಿ ನೌಕರರು ಮತ್ತು ಸಿಬ್ಬಂದಿ ವರ್ಗ.

ಮತದಾನ ಬೆಳಿಗ್ಗೆ ೭ ರಿಂದ ಸಂಜೆ ೬ ರವರೆಗೂ ನಡೆಯಲಿದ್ದು, ಮತದಾರರು ತಮ್ಮ ಮತಗಟ್ಟೆಗಳನ್ನು ತಿಳಿದುಕೊಳ್ಳಲು ಚುನಾವಣಾ ಆಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಆಪ್‌ನಲ್ಲಿ ಮತದಾರರಿಗೆ ಅವರ ಮತಗಟ್ಟೆ ಯಾವುದು ಮತ್ತು ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು, ಅವರ ಮತದಾನ ಗುರುತಿನ ಚೀಟಿ ಎಲ್ಲವೂ ಸಿಗಲಿದೆ.
ಮತದಾನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಕಟ್ಟೆಚ್ಚರ ವಹಿಸಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಬಂದೋಬಸ್ತ್‌ಗಾಗಿ ಸುಮಾರು ೫೦ ಸಾವಿರ ಸಿಬ್ಬಂದಿ ಹಾಗೂ ೬೫ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.ನಾಳೆ ಮತದಾನ ನಡೆಯಲಿರುವ ಮತಗಟ್ಟೆಗಳ ಪೈಕಿ ಸುಮಾರು ೧೯೭೦೧ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸಿದ್ದತೆ ಮಾಡಲಾಗಿದ್ದು, ೧೩೭೦ ಬೂತ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ನಾಳೆ ಲೋಕಸಭೆ ಚುನಾವಣೆ ಹಿನ್ನೆಲೆ ಮತಂiiಂತ್ರ ಮತ್ತು ಸಿಬ್ಬಂದಿ ವರ್ಗದವರನ್ನು ಮತಗಟ್ಟೆಗೆ ಕರೆದೊಯ್ಯಲು ಕಮಲಾಬಾಯಿ ಶಾಲೆ ಆವರಣದಲ್ಲಿ ಸಜ್ಜಾಗಿ ನಿಂತಿರುವ ಬಿಎಂಟಿಸಿ ಬಸ್‌ಗಳು.

೨೪೭ ಮಂದಿ ಕಣದಲ್ಲಿ
ನಾಳೆ ನಡೆಯಲಿರುವ ಚುನಾವಣೆಯಲ್ಲಿ ೧೪ ಕ್ಷೇತ್ರಗಳಿಂದ ೨೪೭ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಈ ಪೈಕಿ ೨೨೬ ಮಂದಿ ಪುರುಷರು ಹಾಗೂ ೨೧ ಮಹಿಳಾ ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲ ೧೪ ಕ್ಷೇತ್ರಗಳಲ್ಲೂ ಅಭ್ಯರ್ಥಿ ನಿಲ್ಲಿಸಿದ್ದು, ಈ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ- ೧೧, ಜೆಡಿಎಸ್-೩ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅತ್ಯಧಿಕ ಅಂದರೆ ೨೯ ಅಭ್ಯರ್ಥಿಗಳು ಕಣದಲ್ಲಿದ್ದರೆ, ಅತಿ ಕಡಿಮೆ ಅಂದರೆ ದಕ್ಷಿಣ ಕನ್ನಡದಲ್ಲಿ ಅಂದರೆ ೯ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
೧೪ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದೆ.
ಘಟಾನುಘಟಿಗಳ ಭವಿಷ್ಯ ನಿರ್ಧಾರ
ನಾಳೆ ನಡೆಯಲಿರುವ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮೈಸೂರಿನ ರಾಜವಂಶಸ್ಥ ಯದುವೀರ ದತ್ತ ಒಡೆಯರ್, ತುಮಕೂರಿನಿಂದ ಮಾಜಿ ಸಚಿವ ವಿ. ಸೋಮಣ್ಣ, ಬೆಂಗಳೂರು ಉತ್ತರದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್, ಖ್ಯಾತ ಹೃದಯ ತಜ್ಞ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ. ಮಂಜುನಾಥ್, ಹಾಸನದಿಂದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಙ, ತೇಜಸ್ವಿಸೂರ್ಯ, ಮುದ್ದಹನುಮೇಗೌಡ, ರಾಜುಗೌಡ, ವೆಂಕಟರಮಣೇಗೌಡ, ಬಿ.ಎನ್. ಚಂದ್ರಪ್ಪ, ಜಯಪ್ರಕಾಶ್‌ಹೆಗಡೆ, ಎಂ. ಲಕ್ಷ್ಮಣ್, ಹಮಾನುಲ್ಲಾಖಾನ್, ಗೋವಿಂದಕಾರಜೋಳ ಸೇರಿದಂತೆ ಬೆಂಗಳೂರು ಕೇಂದ್ರದಿಂದ ಪಿ.ಸಿ. ಮೋಹನ್, ಚಿಕ್ಕಬಳ್ಳಾಪುರದಿಂದ ಮಾಜಿ ಸಚಿವ ಡಾ.ಕೆ. ಸುಧಾಕರ್, ಕಾಂಗ್ರೆಸ್‌ನ ರಕ್ಷಾ ರಾಮಯ್ಯ ಸೇರಿದಂತೆ ಹಲವು ಘಟಾನುಘಟಿ ನಾಯಕರುಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.