ಮತದಾನಕ್ಕೆ ವೇತನ ಸಹಿತ ರಜೆ ನೀಡಲು ತುಷಾರ್ ಸೂಚನೆ

ಬೆಂಗಳೂರು, ಏ.೧೬-ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ದುಡಿಯುವ ವರ್ಗಕ್ಕೆ ವೇತನ ಸಹಿತ ರಜೆ ನೀಡಿ ಎಲ್ಲರಿಗೂ ಮತದಾನ ಮಾಡಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅದೇಶಿಸಿದ್ದಾರೆ.

ಮಂಗಳವಾರ ಎಂ.ಎಸ್ ಬಿಲ್ಡಿಂಗ್ ೬ನೇ ಮಹಡಿಯ ಸಮ್ಮೇಳನಾ ಸಭಾಂಗಣದಲ್ಲಿ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಐಟಿ-ಬಿಟಿ ಸಂಸ್ಥೆಗಳ ಮುಖ್ಯಸ್ಥರ ಜೊತೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಲೋಕಸಭಾ ಕ್ಷೇತ್ರಗಳ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಆಡಲು ಅನುವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆ ೧೯೫೧ ಕಲಂ ೧೩೫ ಬಿ ಅಡಿಯಲ್ಲಿ ಎಲ್ಲಾ ಉಪಬಂಧಗಳಿಗೆ ಒಳಪಟ್ಟು ವೇತನ ಸಹಿತ ರಜೆ ನೀಡಲು ಆದೇಶಿಸಲಾಗಿದೆ ಎಂದರು.

ಅದೇ ರೀತಿ,ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮತದಾನ ದಿನದಂದು ವೇತನ ಸಹಿತ ರಜೆ ನೀಡಿ ಎಲ್ಲರಿಂದಲೂ ಕಡ್ಡಾಯ ಮತದಾನ ಮಾಡಿಸಲು ಐಟಿ-ಬಿಟಿ ಸಂಸ್ಥೆಗಳ ಮುಖ್ಯಸ್ಥರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಎಲ್ಲಾ ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವೇತನ ಸಹಿತ ರಜೆ ನೀಡಲು ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ. ಆ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಲಾಗಿದ್ದು, ಅದಕ್ಕೆ ಎಲ್ಲಾ ಸಂಸ್ಥೆಗಳು ಒಪ್ಪಿಕೊಂಡಿದ್ದಾರೆ. ಅಲ್ಲದೆ ಆಯಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ತಪ್ಪದೆ ಮತದಾನ ಮಾಡಲು ಅರಿವು ಮೂಡಿಸುವ ಕೆಲಸ ಮಾಡಲು ತಿಳಿಸಲಾಗಿದೆ.

ಬೆಂಗಳೂರು ನಗರದಲ್ಲಿ ಐಟಿ-ಬಿಟಿ ಹಬ್ ಇದ್ದು, ಲಕ್ಷಾಂತರ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗರದಲ್ಲಿ ಹೆಚ್ಚು ಐಟಿ-ಬಿಟಿ ಸಂಸ್ಥೆಗಳಿರುವ ಕಡೆ ಹಾಗೂ ಕಡಿಮೆ ಮತದಾನವಾಗಿರುವ ಸಂಸ್ಥೆಗಳಲ್ಲಿ ಹೆಚ್ಚಾಗಿ ಮತದಾನದ ಕುರಿತು ಜಾಗೃತಿ ಮೂಡಿಸಲು ತಿಳಿಸಲಾಗಿದೆ ಎಂದರು.

ಐಟಿ-ಬಿಟಿ ಸಂಸ್ಥೆಗಳಲ್ಲಿ ಹೆಚ್.ಆರ್.ಎಂ.ಎಸ್ ವ್ಯವಸ್ಥೆಯಿದ್ದು, ಆ ಮೂಲಕ ಸಿಬ್ಬಂದಿಗಳಿಗೆ ತಪ್ಪದೆ ಮತದಾನ ಮಾಡಲು ಸಂದೇಶ ಕಳುಹಿಸುವುದು, ಎಲ್ಲಾ ಭಾಷೆಯನ್ನೊಳಗೊಂಡ “ಮೇ ಭಾರತ್ ಹೂನ್” ಚುನಾವಣಾ ಗೀತೆ ಹಾಗೂ ಇನ್ನಿತರೆ ಜಾಗೃತಿಯ ಸಂದೇಶಗಳ ದೃಶ್ಯಾವಳಿಗಳನ್ನು ಎಲ್ಲಾ ಸಂಸ್ಥೆಗಳ ಎಲ್‌ಇಡಿ ಪರದೆಗಳಲ್ಲಿ ಹಾಕಲು ಸೂಚಿಸಲಾಗಿದೆ ಎಂದು ಹೇಳಿದರು.

ಸಾಕಷ್ಟು ಸಿಬ್ಬಂದಿಗಳು ಬೇರೆ ರಾಜ್ಯಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದು, ಇಲ್ಲಿ ಮತದಾನದ ಹಕ್ಕನ್ನು ಹೊಂದಿರುವುದಿಲ್ಲ. ಇನ್ನು ಕೆಲವರಿಗೆ ಮನೆಯಿಂದ ಕೆಲಸ ಮಾಡುತ್ತಿರುವ ಕಾರಣ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಅದಲ್ಲದೆ ಮತಗಟ್ಟೆಗಳಲ್ಲಿ ಏನೂ ವ್ಯವಸ್ಥೆ ಇರುವುದಿಲ್ಲ ಎಂಬ ಮನೋಭಾವಿರುತ್ತದೆ. ಈ ಪೈಕಿ ಮತಗಟ್ಟೆಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಇರುವುದಾಗಿ ಮಾಹಿತಿ ನೀಡಲಾಗಿದ್ದು, ಈ ಬಾರಿ ಐಟಿ-ಬಿಟಿ ಸಂಸ್ಥೆಗಳಲ್ಲಿ ಹೆಚ್ಚು ಮತದಾನವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಈ ವೇಳೆ ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿಯಾದ ಏಕ್ ರೂಪ್ ಕೌರ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಕಾಂತರಾಜು, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ವಿವಿಧ ಐಟಿ-ಬಿಟಿ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಗಳು ಉಪಸ್ಥಿತರಿದ್ದರು.