ಮತದಾನಕ್ಕೆ ಪರ್ಯಾಯ ದಾಖಲೆಗಳು


ಬಳ್ಳಾರಿ,ಮೇ 04: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮೇ.10 ರಂದು ಮತದಾನ ನಡೆಯಲಿದ್ದು,  ಚುನಾವಣಾ ಗುರುತಿನ ಚೀಟಿ (ಎಪಿಕ್ ಕಾರ್ಡ್) ಹಾಗೂ ಭಾರತ ಚುನಾವಣಾ ಆಯೋಗ ನಿಗಧಿಪಡಿಸಿರುವ ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಮತದಾರರು ಮತ ಚಲಾಯಿಸಲು ಮತಗಟ್ಟೆಗಳಿಗೆ ಹೋದ ಸಂದರ್ಭದಲ್ಲಿ ಅವರು ಹೊಂದಿರುವ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಹಾಜರುಪಡಿಸಬೇಕು. ಒಂದು ವೇಳೆ ಅದನ್ನು ಹಾಜರುಪಡಿಸಲು ಸಾಧ್ಯವಿಲ್ಲದಿದ್ದಲ್ಲಿ ಈ ಕೆಳಕಂಡ ಯಾವುದಾದರೂ ಒಂದು ಪರ್ಯಾಯ ದಾಖಲೆ ಮತದಾರರನ್ನು ಗುರುತಿಸುವುದಕ್ಕಾಗಿ ಮತಗಟ್ಟೆ ಯಲ್ಲಿ ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ.
 ಪರ್ಯಾಯ ದಾಖಲೆಗಳು:
ಆಧಾರ್ ಕಾರ್ಡ್, ಎಂಎನ್‍ಆರ್‍ಇಜಿಎ ಜಾಬ್ ಕಾರ್ಡ್, ಬ್ಯಾಂಕ್, ಅಂಚೆ ಕಚೇರಿ ನೀಡಿದ ಭಾವಚಿತ್ರವಿರುವ ಪಾಸ್‍ಬುಕ್, ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್,  ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್, ಎನ್‍ಪಿಆರ್ ಅಡಿಯಲ್ಲಿ ಆರ್‍ಜಿಐ ನೀಡಿದ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್‍ಫೋರ್ಟ್, ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ, ರಾಜ್ಯ, ಕೇಂದ್ರ ಚುನಾವಣಾಧಿಕಾರಿ ಸಾರ್ವಜನಿಕ ಉದ್ದಿಮೆಗಳು ತಮ್ಮ ನೌಕರರಿಗೆ ನೀಡಿರುವ ಸೇವಾ ಗುರುತಿನ ಚೀಟಿ, ಸಂಸದರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರುಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳು, ಅಂಗವಿಕಲರ ಗುರುತಿನ ಚೀಟಿ (ಯುಡಿಐಡಿ ಕಾರ್ಡ್) ಪತ್ರದ ಮೂಲ ಪ್ರತಿಗಳನ್ನು ಮತದಾನದ ವೇಳೆ ಪರ್ಯಾಯ ದಾಖಲೆಗಳನ್ನಾಗಿ ಬಳಸಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.