ಮತಗಟ್ಟೆ ಸಿದ್ದತೆ ಪರಿಶೀಲಿಸಿದ ಜಿಲ್ಲಾಧಿಕಾರಿ

ಚಿತ್ರದುರ್ಗ.ಏ.೨೯; ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಗುರುವಾರ ಚಿತ್ರದುರ್ಗ ನಗರದಲ್ಲಿ ಸ್ಥಾಪಿಸಲಾಗುತ್ತಿರುವ ವಿಶೇಷ ಮತಗಟ್ಟೆಗಳಿಗೆ ಭೇಟಿ ನೀಡಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.ಮತದಾನ ಪ್ರಮಾಣ ಹೆಚ್ಚಿಸಲು ಹಾಗೂ ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಪ್ರತಿಯೊಂದು ಮತಗಟ್ಟೆಗಳಲ್ಲಿ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ಮಹಿಳಾ ಮತದಾರರು, ವಿಕಲಚೇತನರು, ಯುವ ಮತದಾರರನ್ನು ಮತದಾನ ಮಾಡುವಂತೆ ಪ್ರೋತ್ಸಾಹಿಸಲು ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಎರಡು ಸಖಿ, ತಲಾ ಒಂದು ವಿಕಲಚೇತನ ಹಾಗೂ ಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಇದರೊಂದಿಗೆ ಕೆಳಗೋಟೆಯ ಸರಸ್ವತಿ ಕಾನೂನು ಮಹಾವಿದ್ಯಾಲಯದ ಮತಗಟ್ಟೆ ಸಂಖ್ಯೆ 222ರಲ್ಲಿ ಐತಿಹಾಸಿಕ ಪರಂಪರೆ ಬಿಂಬಿಸುವ ಮತಗಟ್ಟೆಯನ್ನೂ ಸಹ ಸ್ಥಾಪಿಸಲಾಗುತ್ತಿದೆ. ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಒಟ್ಟು 125 ಮತಗಟ್ಟೆಗಳಿವೆ.ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ಸೆಂಟ್ ಜೋಸೆಫ್ ಕಾನ್ವೆಂಟ್ ಮತಗಟ್ಟೆ ಸಂಖ್ಯೆ 215 ಹಾಗೂ ಜೆ.ಜೆ.ಹಟ್ಟಿ ಹೊರಪೇಟೆ ಉರ್ದು ಸ್ಕೂಲ್ ಮತಗಟ್ಟೆ ಸಂಖ್ಯೆ 168 ರಲ್ಲಿ ಸ್ಥಾಪಿಸಲಾಗಿರುವ  ಸಖಿ (ಪಿಂಕ್) ಮತಗಟ್ಟೆ, ಹಳೆಯ ಮಾಧ್ಯಮಿಕ ಶಾಲೆ ಮತಗಟ್ಟೆ ಸಂಖ್ಯೆ 117ರ ಯುವ ಮತಗಟ್ಟೆ, ವಿ.ಪಿ.ಬಡಾವಣೆ ಮಾಡಲ್ ಸೈನಿಕ್ ಶಾಲೆ ಮತಗಟ್ಟೆ ಸಂಖ್ಯೆ 197 ವಿಕಲಚೇತನರ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಕಲಚೇತನರಿಗೆ ಅನುಕೂಲವಾಗುವಂತೆ ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.    ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಶ್ರೀನಿವಾಸ ಸೇರಿದಂತೆ ಮತ್ತಿತರರು ಇದ್ದರು.