ಮತಗಟ್ಟೆ, ಚೆಕ್‍ಪೋಸ್ಟ್ ಪರಿಶೀಲಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್


ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೨೦;ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರು ಚಿತ್ರದುರ್ಗ ನಗರದ ವಿವಿಧ ಮತಗಟ್ಟೆ ಹಾಗೂ ಚೆಕ್‍ಪೋಸ್ಟ್‍ಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆಗಳು ಮತದಾರ ಸ್ನೇಹಿಯಾಗಿರಬೇಕು. ಬೇಸಿಗೆ ಹಿನ್ನಲೆಯಲ್ಲಿ ಮತಗಟ್ಟೆಯಲ್ಲಿ ಅಗತ್ಯ ನೆರಳಿನ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು, ವಿದ್ಯುತ್, ಶೌಚಾಲಯಗಳು ಇರಬೇಕು. ವಿಕಲಚೇತನರು ಹಾಗೂ ವಯಸ್ಸಾದ ಮತದಾರರನ್ನು ವ್ಹೀಲ್‍ಚೇರ್ ಮೂಲಕ ಮತಗಟ್ಟೆಗೆ ಕೊಂಡೊಯ್ಯಲು ಅನುಕೂಲವಾಗುವಂತೆ ರ್ಯಾಂಪ್ ಸೌಲಭ್ಯ ಕಲ್ಪಿಸಬೇಕು. ತಾಯಂದಿರು ಮಕ್ಕಳಿಗೆ ಎದೆ ಹಾಲುಣಿಸಲು ಪ್ರತ್ಯೇಕ ಕೋಣೆ ಕಾಯ್ದಿರಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಚಿತ್ರದುರ್ಗ ತಾಲ್ಲೂಕು ಕ್ಯಾದಿಗೆರೆ ಹಾಗೂ ನಗರದ ಆರ್.ಟಿ.ಓ ಕಚೇರಿ ಮುಂಭಾಗದ ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಚೆಕ್‍ಪೋಸ್ಟ್‍ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕಾರ್ಯವೈಖರಿ ಪರಿಶೀಲಿಸಿದರು.